ಕನ್ನಡಪ್ರಭವಾರ್ತೆ ಅಮೀನಗಡ
ಸಾಮಾಜಿಕ ಸೇವೆ ಮಾಡಿದ ವ್ಯಕ್ತಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಸೇವಾ ಮನೋಭಾವ ಬೆಳೆಸಿಕೊಂಡ ವ್ಯಕ್ತಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಸೇವಾದಳ ತಾಲೂಕು ಘಟಕದ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.ಅವರು ಸಮೀಪದ ಸೂಳೇಬಾವಿಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಬಾಗಲಕೋಟೆ, ಹುನಗುಂದ, ಇಲಕಲ್ ತಾಲೂಕು ಸಮಿತಿ, ಸೂಳೇಬಾವಿ ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಮೂರು ದಿನ ಹಮ್ಮಿಕೊಂಡಿರುವ ಯೋಗ ಮತ್ತು ನಾಯಕತ್ವ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನಾಂಗ ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಮಾತನಾಡುವ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರು. ಶಿಬಿರ ಉದ್ಘಾಟಿಸಿ ಮಾತನಾಡಿದ ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ, ದೇಶದ ಸಾರ್ವಭೌಮತ್ವ ಕಾಪಾಡುವ ಹೊಣೆ ಯುವಜನಾಂಗದ ಮೇಲಿದೆ. ನಿಸ್ವಾರ್ಥ ಸೇವಾ ಮನೋಭಾವ ವ್ಯಕ್ತಿತ್ವ ಬೆಳವಣಿಗೆ ಸಹಕಾರಿಯಾಗಲಿದೆ. ಯುವ ಸಮೂಹ ದುಷ್ಟ ಪ್ರಭಾವಕ್ಕೆ ಒಳಗಾಗದೆ ಉತ್ತಮ ಚಿಂತನೆ ಆಲೋಚನೆ ಅಳವಡಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ದೇಶದ ಐಕ್ಯತೆ, ಸಮಗ್ರತೆ ಸಮಭಾವತ್ವ ಉಳಿಸಿ ಬೆಳೆಸಬೇಕಾಗಿದೆ ಎಂದರು.ಮುಖ್ಯಅತಿಥಿ ನಿವೃತ್ತ ಉಪ ಪ್ರಾಚಾರ್ಯ ಎ.ಎಚ್. ಬೆಲ್ಲದ ಮಾತನಾಡಿ ಯುವಶಕ್ತಿ ಅಪಾರ ಜ್ಞಾನಸಂಪತ್ತು, ಉತ್ತಮ ಆರೋಗ್ಯ ಕಾಪಾಡಿಕೊಂಡು ದೇಶದ ಉತ್ತಮ ನಾಗರೀಕರಾಗಬೇಕು ಎಂದರು. ಭಾರತ ಸೇವಾದಳ ಜಿಲ್ಲಾ ಸಂಘಟಕ ಮಹೇಶ ಪತ್ತಾರ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯದ ಕೇಂದ್ರ ಸಮಿತಿ ಸದಸ್ಯ ವಿಶ್ವನಾಥ ಪಾಟೀಲ, ಸಮಾಜಸೇವಕ ಕೃಷ್ಣ ರಾಮದುರ್ಗ, ಸಂಗಣ್ಣ ಚಿನಿವಾಲರ, ನಾಗರಾಜ ಹೊಸೂರ, ನಾಗೇಂದ್ರ ನಿರಂಜನ, ರವಿ ರಾಮದುರ್ಗ, ಎ.ಬಿ.ಅತ್ತಾರ, ನಾಗರಾಜ ಕಲಬುರ್ಗಿ, ಹನಮಂತ ಘಂಟಿ ಸೇರಿ ಹಲವರಿದ್ದರು. ಎಸ್.ಕೆ.ಬಂಡರಗಲ್ ಸ್ವಾಗತ, ಮಲ್ಲಿಕಾರ್ಜುನ ಸಜ್ಜನ್ ನಿರೂಪಣೆ, ಎಸ್.ಎಲ್.ಸಂಗಮದ ವಂದಿಸಿದರು.