ಸ್ವಂತ ಮನೆಯೊಂದನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ, ಇಂದಿನ ದುಬಾರಿ ಯುಗದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳುವುದು ಹೆಚ್ಚಿನವರಿಗೆ ಸುಲಭವೇನಲ್ಲ. ಅದರಲ್ಲೂ ಬಡವರಿಗೆ ಇದು ಕಠಿಣವಾದ ಸವಾಲಾಗಿರುತ್ತದೆ. ಅವರ ಕಷ್ಟವನ್ನು ಮನಗಂಡು ವಸತಿ ರಹಿತರಿಗೆ ಸೂರು ಕಲ್ಪಿಸಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಸ್ವಂತ ಮನೆಯೊಂದನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ, ಇಂದಿನ ದುಬಾರಿ ಯುಗದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳುವುದು ಹೆಚ್ಚಿನವರಿಗೆ ಸುಲಭವೇನಲ್ಲ. ಅದರಲ್ಲೂ ಬಡವರಿಗೆ ಇದು ಕಠಿಣವಾದ ಸವಾಲಾಗಿರುತ್ತದೆ. ಅವರ ಕಷ್ಟವನ್ನು ಮನಗಂಡು ವಸತಿ ರಹಿತರಿಗೆ ಸೂರು ಕಲ್ಪಿಸಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಸಚಿವರ ಗೃಹ ಕಚೇರಿಯಲ್ಲಿ ನಿರಾಶ್ರಿತರಿಗೆ ನಿವೇಶನ ಮಂಜೂರಾತಿ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿ, ಸೌಲಭ್ಯ ವಂಚಿತ ಕಡುಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.ನಗರದ ಸೂರು ವಂಚಿತರಿಗೆ ಹಂತ ಹಂತವಾಗಿ ನಿವೇಶನ ನೀಡಲಾಗುವುದು. ಯಾರು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಜಾಗದ ಕೊರತೆಯಿಂದ ಹತ್ತಾರು ವರ್ಷಗಳ ಕಾಲ ಕಾಯ್ದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಮುಂದೆ ಮನೆ ನಿರ್ಮಾಣಕ್ಕಾಗಿ 2.70 ಲಕ್ಷ ಪ್ರತಿ ಫಲಾನುಭವಿಗಳಿಗೆ ಯೋಜನೆ ಅನುಸಾರ ಒದಗಿಸುವ ಕೆಲಸ ಮಾಡಲಾಗುತ್ತದೆ. ಫಲಾನುಭವಿಗಳು ಮನೆ ಕಟ್ಟಲು ಸರ್ಕಾರಿ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.ನಗರದ ಸರ್ವೇ ನಂ.7ರಲ್ಲಿ 509 ನಿರಾಶ್ರಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಆದರೆ, ಅದರಲ್ಲಿ ಹಲವರಿಗೆ ಹಕ್ಕು ಪತ್ರ ಮಾತ್ರ ನೀಡಿದ್ದು, ನಿವೇಶನ ಸ್ಥಳ ದೊರೆತಿರಲಿಲ್ಲ. ಹೀಗಾಗಿ ಹಲವು ವರ್ಷಗಳಿಂದ ನಿವೇಶನ ಪಡೆಯದೇ ಕೇವಲ ಹಕ್ಕುಪತ್ರ ಮಾತ್ರ ಪಡೆದುಕೊಂಡು ಬಂದಿದ್ದ ಹಲವರಿಗೆ ಪ್ರಸಕ್ತ ಇದೇ ಸರ್ವೇ ನಂಬರಿನಲ್ಲಿ ಹಿಂದೆ ನಿವೇಶನ ಪಡೆಯದೇ ಖಾಲಿ ಹಕ್ಕು ಪತ್ರ ಪಡೆದಿದ್ದ 134 ಜನರಲ್ಲಿ 49 ಜನರಿಗೆ ಲಭ್ಯತೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದವರಿಗೆ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.ಕೆಲವೊಂದು ಹಕ್ಕುಪತ್ರಗಳು ತಿದ್ದುಪಡಿಯಾಗಿದ್ದು, ಸಮಸ್ಯೆ ಉಂಟಾಗಿತ್ತು. ಹೀಗಾಗಿ ಮುಂದೆ ಅವೆಲ್ಲವನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ, ನಾನಾಸಾಬ ಮಡಿವಾಳಕರ್, ಮುಖಂಡರಾದ ಮಹಾದೇವಪ್ಪ ಸಾಲಿಮನಿ, ಹಣಮಂತ್ರಾಯಗೌಡ ರಾಕಂಗೇರಾ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಫಲಾನುಭವಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.