ಹೂವಿನಹಡಗಲಿ:ತಾಲೂಕಿನ ಹ್ಯಾರಡ ಹೊಸ ಮಲಿಯಮ್ಮ ಕೆರೆ, ಹಳೆ ಮಲಿಯಮ್ಮ ಕೆರೆ, ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಾಕಾರ ಜಾಕ್ವೆಲ್‌ನಲ್ಲಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ.
ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಹ್ಯಾರಡ, ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರ, ಹೊಳಲು, ಮೈಲಾರ, ಗೊರವಿನಗುಡ್ಡದ ತಾಂಡಾ ಸೇರಿದಂತೆ ಹತ್ತಾರು ಹಳ್ಳಿ ಗ್ರಾಮಸ್ಥರು ಸೇರಿ ಕೆರೆ ಹೋರಾಟ ಸಮಿತಿ ರಚನೆ ಮಾಡಿಕೊಂಡು ಹೋರಾಟಕ್ಕೆ ಸಿದ್ದರಾಗುತ್ತಿದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ದೂರದಿಂದ ಪಂಪ್ ಮೋಟಾರ್ ಸಾಫ್ಟ್ ತರಿಸಿ ಮಂಗಳವಾರದಿಂದ ದುರಸ್ತಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಾಕಾರ ಜಾಕ್ವೆಲ್‌ಗೆ ಶಾಸಕ ಕೃಷ್ಣನಾಯ್ಕ ಮಂಗಳವಾರ ಭೇಟಿ ನೀಡಿದ್ದರು. ಹೆಚ್ಚು ಕಾಳಜಿ ವಹಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಶೀಘ್ರ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಹ್ಯಾರಡ, ದಾಸನಹಳ್ಳಿ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು, ಆ ಭಾಗದಲ್ಲಿ ದನಕರು, ಕುರಿ ಮೇಕೆ ಮತ್ತು ಕಾಡು ಪ್ರಾಣಿಗಳಿಗೆ ಸೇರಿದಂತೆ ರೈತರಿಗೆ ಬಹಳಷ್ಟು ನೀರಿನ ತೊಂದರೆ ಉಂಟಾಗಿದೆ. ಆದರಿಂದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ದುರಸ್ತಿ ಕೆಲಸ ಮುಗಿಸಬೇಕೆಂದು ತಾಕೀತು ಮಾಡಿದ್ದರು.ಹ್ಯಾರಡ ಗ್ರಾಮದ ರೈತರು ಕೂಡಾ ಜಾಕ್ವೆಲ್ ಬಳಿಯೇ ಇದ್ದು ದುರಸ್ತಿ ಕಾರ್ಯ ಗಮನಿಸುತ್ತಿದ್ದು, ಯಾವಾಗ ನೀರು ಬರುತ್ತದೆ ಎಂದು ಕಾಯುತ್ತಿದ್ದಾರೆ.