ದೇವೇಗೌಡರ ಹುಟ್ಟೂರು ಹರದನಹಳ್ಳಿಗೆ ಹತ್ತಿರವೇ ಇರುವ ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯವರು ಚೆನ್ನಮ್ಮ. ಅವರ ತಂದೆಯ ಹೆಸರೂ ದೇವೇಗೌಡ. ತಾಯಿ ಕಾಳಮ್ಮ. ಅಪ್ಪಟ ಕೃಷಿ ಕುಟುಂಬ. ಸ್ವಾತಂತ್ರ್ಯ ಪೂರ್ವದಲ್ಲೇ ಚೆನ್ನಮ್ಮ ಅವರು ಎಸ್‌ಎಸ್‌ಎಲ್‌ಸಿವರೆಗೂ ಶಿಕ್ಷಣ ಪಡೆದಿದ್ದರು. ಕುಟುಂಬದ ಹಿರಿಯ ಮಗಳಾಗಿದ್ದ ಚೆನ್ನಮ್ಮ ಅವರಿಗೆ ನಾಲ್ವರು ತಮ್ಮಂದಿರು. ಮೂವರು ತಂಗಿಯರು. ಹಿರಿಯ ಮಗಳಾಗಿ ಒಡಹುಟ್ಟಿದವರನ್ನು ಸಾಕ್ಷಾತ್ ತಾಯಿಯಂತೆ ಸಾಕಿ ಸಲಹಿದ್ದು ಇದೇ ಚೆನ್ನಮ್ಮ. ಚಿಕ್ಕಂದಿನಿಂದಲೂ ಕುಟುಂಬವನ್ನು ಅಚ್ಚುಕಟ್ಟಾಗಿ ಸಂಭಾಳಿಸಿ ನಿರ್ವಹಿಸುವ ಗುಣ ಮೈಗೂಡಿಸಿಕೊಂಡಿದ್ದ ಚೆನ್ನಮ್ಮ, ಕಡೆವರೆಗೂ ಅದೇ ಜವಾಬ್ದಾರಿ ನಿಭಾಯಿಸಿದ್ದು ಅವರ ತಾಯ್ತನಕ್ಕೆ ತಾಜಾ ಉದಾಹರಣೆ.ಅಚ್ಚುಕಟ್ಟಾಗಿ ಸಂಸಾರ
1954ರ ಮೇ 25ರಂದು ಎಚ್.ಡಿ.ದೇವೇಗೌಡರನ್ನು ಚೆನ್ನಮ್ಮ ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ನಾಲ್ವರು ಗಂಡು ಮಕ್ಕಳು ಸೇರಿ 6 ಮಕ್ಕಳು. ಹಿರಿಯ ಮಗ ನಿವೃತ್ತ ಐಎಎಸ್ ಅಧಿಕಾರಿ ಬಾಲಕೃಷ್ಣೇಗೌಡ, ಎರಡನೇ ಮಗ ಮಾಜಿ ಸಚಿವ, ಹಾಲಿ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ, 3ನೇ ಮಗ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, 4ನೇ ಮಗ ವೈದ್ಯರಾಗಿರುವ ಎಚ್.ಡಿ.ರಮೇಶ್. ಅನಸೂಯ ಮತ್ತು ಶೈಲಜಾ ಹೆಣ್ಣುಮಕ್ಕಳು. ಇಡೀ ಕುಟುಂಬಕ್ಕೆ ಸಮಾಜದಲ್ಲಿ ಗೌರವ ತರುವ ರೀತಿಯಲ್ಲಿ ಸಂಸಾರ ನಡೆಸಿದ ಚೆನ್ನಮ್ಮ, ಪತಿ ದೇವೇಗೌಡರು ಹಾಗೂ ಮಕ್ಕಳು ರಾಜಕೀಯವಾಗಿ, ಸಾಮಾಜಿಕವಾಗಿ ಏನೆಲ್ಲ ಸ್ಥಾನಮಾನ ಸಂಪಾದಿಸಿಕೊಂಡಿದ್ದಾರೋ ಅದಕ್ಕೆಲ್ಲಾ ಬೆನ್ನೆಲುಬಾಗಿ ನಿಂತವರು.
ದೇವೇಗೌಡರು ಚೆನ್ನಮ್ಮ ಅವರನ್ನು ಮದುವೆ ಆಗುವ ಮೊದಲೇ 1952ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ದೇವೇಗೌಡರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನದಿಂದಲೂ ಚೆನ್ನಮ್ಮ ಅವರು, ಪತಿಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದರು. ಪತಿಯು ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾದರೆ, ಚೆನ್ನಮ್ಮ ಮಕ್ಕಳ ಪಾಲನೆ, ಪೋಷಣೆ ಜೊತೆಗೆ ಅವರ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಂಡು, ಸಮರ್ಥವಾಗಿ ಸಂಭಾಳಿಸಿದರು. ಆದರ್ಶ ಗೃಹಿಣಿಯಾಗಿದ್ದರು. ದೇವೇಗೌಡರು ರಾಜಕೀಯದಲ್ಲಿ ಕೌಟುಂಬಿಕ ಅಡೆತಡೆ ಇಲ್ಲದೆ ಬೆಳೆದು ನಿಲ್ಲಲು, ಚೆನ್ನಮ್ಮ ಅವರು ಕುಟುಂಬದ ಭಾರ ಹೊತ್ತುಕೊಂಡಿದ್ದೇ ಪ್ರಮುಖ ಕಾರಣ. ನಂತರದಲ್ಲಿ ಪತಿ ಹಾಗೂ ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಚೆನ್ನಮ್ಮ ಹುರಿದುಂಬಿಸುವ ಶಕ್ತಿಯಾಗಿ ನಿಂತರೆ ಹೊರತು, ಅವರೆಂದೂ ನೇರವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರಲ್ಲ.ದೆಹಲಿಗೆ ಹೋದರೂ
ಹಳ್ಳಿ ಮರೆಯಲಿಲ್ಲ
ಕೌಟುಂಬಿಕ ಜೀವನದ ಆರಂಭದಲ್ಲಿ ಕುಟುಂಬ ಹೊಳೆನರಸೀಪುರದಲ್ಲಿ ನೆಲೆಸಿತ್ತು. ನಂತರದ ದಿನಗಳಲ್ಲಿ ದೇವೇಗೌಡರು ಹುಟ್ಟೂರು ಬಿಟ್ಟು ಮಕ್ಕಳ ವಿದ್ಯಾಭ್ಯಾಸ ನಿಮಿತ್ತ ಬೆಂಗಳೂರು ಸೇರಿದಾಗ ಚೆನ್ನಮ್ಮ ಅವರು ಜೊತೆಯಾಗಿ ಹೆಜ್ಜೆ ಹಾಕಿದರೆ ಹೊರತು, ಯಾವುದಕ್ಕೂ ಮರುಮಾತು ಆಡಿದವರಲ್ಲ. ದೇವೇಗೌಡರು ಸಿಎಂ ಆದಾಗ, ಬಳಿಕ ಪ್ರಧಾನಿ ಆದಾಗ ಕೆಲ ತಿಂಗಳು ದೆಹಲಿಯಲ್ಲಿ ಇದ್ದರೂ ಚೆನ್ನಮ್ಮ ಎಂದೂ ತಾವು ಉಸಿರಾಗಿಸಿಕೊಂಡಿದ್ದ ಗ್ರಾಮೀಣ ಜೀವನವನ್ನು ಕಿಂಚಿತ್ತೂ ಮರೆಯಲಿಲ್ಲ.ದೇವೇಗೌಡರ ದೀರ್ಘಾಯುಷ್ಯ
ಹಿಂದಿನ ದೊಡ್ಡ ಶಕ್ತಿ ಚೆನ್ನಮ್ಮ
ಎಸ್ಸೆಸ್ಸೆಲ್ಸಿವರೆಗೆ ಓದಿದ್ದರೂ ಕೌಟುಂಬಿಕ ಜೀವನವನ್ನು ಚೆನ್ನಮ್ಮ ಅವರು ಡಾಕ್ಟರೇಟ್ ಮಾಡಿದವರಂತೆ ನಿಭಾಯಿಸಿದರು. ರಾಜಕೀಯ ಜಂಜಾಟದ ನಡುವೆಯೂ ದೇವೇಗೌಡರ ದೀರ್ಘಾಯುಷ್ಯದ ಹಿಂದಿನ ಗುಟ್ಟು ಚೆನ್ನಮ್ಮ. ತಾವು ಮದುವೆಯಾದ ದಿನದಿಂದಲೂ ತಮ್ಮ ಪತಿ ದೇವೇಗೌಡರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಆಗಿನ್ನೂ ರಾಜಕೀಯದಲ್ಲಿ ಚಿಗುರೊಡೆಯುತ್ತಿದ್ದ ದೇವೇಗೌಡರಿಗೆ ಸಾಕಷ್ಟು ಸವಾಲುಗಳಿದ್ದವು. ಅವುಗಳನ್ನೆಲ್ಲಾ ನಿಭಾಯಿಸುವುದರಲ್ಲೇ ದೇವೇಗೌಡರ ದಿನವೆಲ್ಲಾ ಕಳೆದು ಹೋಗುತ್ತಿತ್ತು. ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡಲು ಸಮಯ ಸಿಗುತ್ತಿರಲಿಲ್ಲ. ಆದರೆ, ಇದರ ಬಗ್ಗೆಯೆಲ್ಲಾ ಗಮನವಿಡುತ್ತಿದ್ದ ಚೆನ್ನಮ್ಮ, ದೇವೇಗೌಡರು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಲು ನೆನಪಿಸುತ್ತಿದ್ದರು. ಅವರಿದ್ದಲ್ಲಿಗೆ ಮನೆಯೂಟ ತಲುಪಿಸುತ್ತಿದ್ದರು. ದೇವೇಗೌಡರಿಗೆ ರಾಗಿ ಮುದ್ದೆ, ಸೊಪ್ಪಿನ ಸಾರು ಎಂದರೆ ಭಾರೀ ಅಚ್ಚುಮೆಚ್ಚು. ಅದೇ ಅವರ ಆರೋಗ್ಯದ ಗುಟ್ಟು ಎಂದರೂ ತಪ್ಪಲ್ಲ. ಹಾಗಾಗಿ, ಚೆನ್ನಮ್ಮ ಅದಕ್ಕೆ ಪೂರಕವಾಗಿಯೇ ಅಡುಗೆ ಮಾಡುತ್ತಿದ್ದರು. ದೇವೇಗೌಡರ ಈ ಗುಟ್ಟನ್ನು ಅರಿತಿದ್ದ ಅವರ ಆಪ್ತರೆಲ್ಲರೂ ಅವರನ್ನು ಮನೆಗೆ ಊಟಕ್ಕೆಂದು ಆಹ್ವಾನಿಸಿದಾಗಲೆಲ್ಲಾ ಮುದ್ದೆ, ಸೊಪ್ಪಿನ ಸಾರನ್ನೇ ಮಾಡಿ ಉಣಬಡಿಸುತ್ತಿದ್ದರು.ಮನೆಯಲ್ಲೇ ದೇವಸ್ಥಾನ,
ನಿತ್ಯವೂ ತಪ್ಪದೆ ಪೂಜೆ
ದೇವೇಗೌಡರಂತೆಯೇ ಚೆನ್ನಮ್ಮ ಕೂಡ ಮಹಾನ್ ದೈವಭಕ್ತೆ. ಹಾಗಾಗಿ, ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮನೆಯಲ್ಲಿ ದೇವಸ್ಥಾನದ ಮಾದರಿಯಲ್ಲೇ ದೇವರ ಮನೆಯನ್ನು ನಿರ್ಮಿಸಿಕೊಂಡಿದ್ದರು. ಮನೆಯಲ್ಲಿ ಪ್ರತಿದಿನ ಪೂಜೆ ಮಾಡುತ್ತಿದ್ದರು. ಕನಿಷ್ಠ ಅರ್ಧ ಗಂಟೆ ಪೂಜೆಗೆ ಮೀಸಲಾಗಿರುತ್ತಿತ್ತು. ಸಾಕಷ್ಟು ಮಂತ್ರ, ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸುತ್ತಿದ್ದ ಅವರು, ತಮ್ಮ ಪತಿ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಹೆಸರು, ನಕ್ಷತ್ರ, ಗೋತ್ರ ಅರಿತಿದ್ದು, ಅವರ ಹೆಸರಿನಲ್ಲಿಯೂ ಪೂಜೆ ಮಾಡುತ್ತಿದ್ದರು. ಮನೆದೇವರು ಹರದನಹಳ್ಳಿಯ ಈಶ್ವರ ಎಂದರೆ ಅಚ್ಚುಮೆಚ್ಚು. ಎಲ್ಲಾ ಹಬ್ಬ ಹರಿದಿನಗಳಲ್ಲಿ ಈಶ್ವರನ ದರ್ಶನಕ್ಕೆ ಬರುತ್ತಿದ್ದರು. ಆದರೆ, ತಮ್ಮ ಕಡೆ ದಿನಗಳಲ್ಲಿ ಆರೋಗ್ಯ ಹದಗೆಟ್ಟ ನಂತರ ಬರಲಿಲ್ಲ. ದೇವೇಗೌಡರು ಮಾತ್ರವೇ ಈಶ್ವರ ಹಾಗೂ ಮಾವಿನಕೆರೆ ರಂಗನಾಥನ ದರ್ಶನಕ್ಕೆ ಬರುತ್ತಿದ್ದರು.
--ಯಾರೇ ಮನೆಗೆ ಹೋದರೂ ಊಟ ಮಾಡಿಸಿ ಕಳಿಸ್ತಿದ್ರು
ದೇವೇಗೌಡರು ರಾಜಕೀಯದಲ್ಲಿ ಎಷ್ಟೇ ಮೇಲೇರಿದರೂ ಚೆನ್ನಮ್ಮ ಮಾತ್ರ ತಮ್ಮೂರು, ತಮ್ಮವರನ್ನು ಮರೆಯಲಿಲ್ಲ. ಹುಟ್ಟೂರನ್ನು ಬಿಟ್ಟು ಬೆಂಗಳೂರು, ದೆಹಲಿಗೆ ಹೋದರೂ ತಮ್ಮ ಸಂಬಂಧಿಗಳ ಎಲ್ಲಾ ಕಾರ್ಯಕ್ರಮಕ್ಕೂ ತಪ್ಪದೇ ಬರುತ್ತಿದ್ದರು. ತಾವು ಶಾಶ್ವತವಾಗಿ ಬೆಂಗಳೂರಿನಲ್ಲಿ ನೆಲೆಸಿದ ನಂತರ ಪದ್ಮನಾಭ ನಗರದ ತಮ್ಮ ಮನೆಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಿದ್ದರಾದರೂ ಹಾಸನದವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ತಮ್ಮೂರಿನವರು ಎನ್ನುವ ಪ್ರೀತಿಯಿಂದ ಬಂದವರಿಗೆ ಊಟ ಬಡಿಸದೇ ಕಳುಹಿಸುತ್ತಿರಲಿಲ್ಲ. ಕಡೆ ಪಕ್ಷ ದೇವರ ಮನೆಯಲ್ಲಿ ಪೂಜೆಗಿಟ್ಟಿದ್ದ ಹಣ್ಣನ್ನಾದರೂ ಕೊಟ್ಟು ಮಾತನಾಡಿಸಿ ಕಳುಹಿಸುತ್ತಿದ್ದರು.
ಮೈದುನನ ಮಗನಿಂದಲೇ ಚೆನ್ನಮ್ಮಗೆ ಆ್ಯಸಿಡ್ ದಾಳಿ
ಚೆನ್ನಮ್ಮ ಅವರು ಎಂದೂ ಯಾರ ತಂಟೆ-ತಕರಾರಿಗೂ ಹೋದವರಲ್ಲ. ಆದರೂ ಕುಟುಂಬದಲ್ಲಿ ದಾಯಾದಿ ಕಲಹದಿಂದಾಗಿ 2001ರಲ್ಲಿ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. 2001ರ ಫೆ.21ರ ಬುಧವಾರ ರಾತ್ರಿ ಚೆನ್ನಮ್ಮ ಹಾಗೂ ಹಿರಿಯ ಸೊಸೆ ಭವಾನಿ ಅವರು ಶಿವರಾತ್ರಿಯಂದು ದೇವೇಗೌಡರ ಮನೆದೇವರು ಹರದನಹಳ್ಳಿಯ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವಾಗಲೇ ದೇವೇಗೌಡರ ತಮ್ಮ ಬಸವೇಗೌಡ ಎಂಬುವರ ಮಗ ಲೋಕೇಶ್ ಎಂಬಾತಯಿವರ ಮೇಲೆ ಆ್ಯಸಿಡ್ ಎರಚಿದ್ದ. ಅದೃಷ್ಟವಶಾತ್ ಅತ್ತೆ-ಸೊಸೆಗೆ ಸಣ್ಣಪುಟ್ಟ ಗಾಯಗಳಾದವು. ಜೀವಕ್ಕೆ ಅಪಾಯ ಆಗಲಿಲ್ಲ. ಆರೋಪಿಗೆ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.