ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಾಜ್ಯ ಸರ್ಕಾರ ಕಳೆದ ಜೂನ್‌ನಿಂದ ಘೋಷಿಸಿರುವ ಶಕ್ತಿ ಯೋಜನೆಯಿಂದ ಅಜ್ಜನ ಜಾತ್ರೆಗೆ ಈ ಸಲ ಪ್ರತಿವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಲಗ್ಗೆ ಇಡುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ಕೆಲವೊಂದಿಷ್ಟು ಮಾರ್ಪಡುಗಳೊಂದಿಗೆ ಸಿದ್ಧಾರೂಢ ಅಜ್ಜನ ಜಾತ್ರೆಯ ತಯಾರಿಯನ್ನು ಮಠದ ಟ್ರಸ್ಟ್ ಕಮಿಟಿ ಮಾಡುತ್ತಿದೆ.
ಅಮ್ಯೂಜ್ ಮೆಂಟ್ (ಆಟಿಕೆ, ತಿರುಗುಣಿ) ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ರಥಬೀದಿಯಲ್ಲಿ ರಸ್ತೆಯ ಬದಲು ಫುಟ್‌ಪಾತ್ ಮೇಲೆಯೇ ಅಂಗಡಿಗಳನ್ನು ಹಚ್ಚಬೇಕು. ಯಾತ್ರಿ ನಿವಾಸದ ಎದುರಿನ ಜಾಗೆಯನ್ನು ಅರ್ಧಕ್ಕೂ ಹೆಚ್ಚು ಭಾಗ ಖುಲ್ಲಾ ಇಡಬೇಕು. ಹೀಗೆ ಬಗೆ ಬಗೆಯಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ.ಶಕ್ತಿ ಯೋಜನೆ:
ಶಕ್ತಿ ಯೋಜನೆಯನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ. ಅದು ಘೋಷಣೆಯಾದ ಬಳಿಕ ಮಠಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶಕ್ತಿ ಯೋಜನೆಗೂ ಮುನ್ನ ಪ್ರತಿದಿನ 2000-3000 ಜನ ಬರುತ್ತಿದ್ದರು. ಅದೀಗ 6-7 ಸಾವಿರಕ್ಕೆ ಏರಿದೆ. ಇನ್ನು ಭಾನುವಾರ ಹಾಗೂ ಸೋಮವಾರ 5000 ಇರುತ್ತಿತ್ತು. ಅದೀಗ 8-9 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಅಮವಾಸ್ಯೆಗಂತೂ 10 -12 ಸಾವಿರ ಜನ ಭಕ್ತರ ದಂಡು ಶಕ್ತಿ ಯೋಜನೆಗೂ ಮೊದಲು ಬರುತ್ತಿದ್ದರು. ಆದರೆ ಇದೀಗ 18 ಸಾವಿರಕ್ಕೂ ಹೆಚ್ಚಾಗಿದೆ.ಹಾಗಂತ ಅಲ್ಲಿಂದ ಇಲ್ಲಿ ವರೆಗೂ ಇದೇ ರೀತಿ ಜನರ ದಂಡು ಬರುತ್ತಿದೆ ಅಂತೇನೂ ಇಲ್ಲ. ಕಳೆದ ಒಂದೆರಡು ತಿಂಗಳಿಂದ ಸ್ವಲ್ಪ ಪ್ರಮಾಣ ಇಳಿಕೆ ಕೂಡ ಆಗಿತ್ತು. ಸುಗ್ಗಿ ಕಾಲ ಕಾರಣದಿಂದ ಮಠಕ್ಕೆ ಬರುವವರ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಕಳೆದ ಹದಿನೈದು ದಿನಗಳಿಂದ ಮತ್ತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 6-7 ಸಾವಿರ ಸಂಖ್ಯೆ ದಾಟುತ್ತಿದೆ.
ಜಾತ್ರೆಯಲ್ಲಿ ಎಷ್ಟು?ಪ್ರತಿವರ್ಷ ಅಜ್ಜನ ರಥ ಇದ್ದ ದಿನ ಅಂದರೆ ಶಿವರಾತ್ರಿಯ ಮರುದಿನ ಕನಿಷ್ಠವೆಂದರೂ 3.5 ಲಕ್ಷದಿಂದ 4 ಲಕ್ಷದ ವರೆಗೂ ಜನ ಬರುತ್ತಿರುತ್ತಾರೆ. ಇದು ಅಂದಾಜು ಮಾತ್ರ. ಹಾಗೆ ನೋಡಿದರೆ ಇದರ ಪ್ರಮಾಣ ಇನ್ನು ಜಾಸ್ತಿಯೇ ಇರುತ್ತದೆ. ಶಿವರಾತ್ರಿ ದಿನ ಕನಿಷ್ಠವೆಂದರೂ 2.5 ಲಕ್ಷ ಜನ ಮಠಕ್ಕೆ ಭೇಟಿ ಕೊಡುತ್ತಾರೆ. ಈ ಸಲ ಮಹಿಳೆಯರಿಗೆಲ್ಲ ಬಸ್ ಉಚಿತವಿರುವುದರಿಂದ ಜಾತ್ರೆಯ ದಿನವೇ ಅಂದರೆ 5-6 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದರೆ, ಅದರ ಹಿಂದಿನ ದಿನ ಶಿವರಾತ್ರಿಯಂದು 3-4 ಲಕ್ಷ ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಜಾತ್ರೆಯ ದಿನ ಬರುವ ಭಕ್ತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮೊದಲಿನಿಂದ ರಥಬೀದಿಯಲ್ಲಿ ಎಲ್ಲೆಂದರಲ್ಲಿ ಅಂಗಡಿ ಹಚ್ಚಲು ಈ ಸಲ ಅವಕಾಶವಿಲ್ಲ. ರಥಬೀದಿಯಲ್ಲಿನ ಫುಟ್‌ಪಾತ್ ಮೇಲೆ ಮಾತ್ರ ಅಂಗಡಿಗಳನ್ನು ಹಚ್ಚಬೇಕು. ಈ ಸಂಬಂಧ ಈಗಾಗಲೇ ಅಂಗಡಿಕಾರರೊಂದಿಗೆ ಸಭೆ ನಡೆಸಲಾಗಿದೆ. ಉಳಿದಂತ ಅಂಗಡಿಗಳನ್ನು ಕೆರೆಯ ದಂಡೆಯ ಮೇಲೆ ಹಚ್ಚಲು ಅವಕಾಶ ಕೊಡಲಾಗುತ್ತಿದೆ.ಇನ್ನು ಪ್ರತಿವರ್ಷ ಯಾತ್ರಿ ನಿವಾಸದ ಎದುರಿಗೆ ಅಮ್ಯೂಜ್‌ಮೆಂಟ್ (ಮಕ್ಕಳ ಆಟಿಕೆ) ಅಳವಡಿಸಲಾಗುತ್ತಿದೆ. ಅವುಗಳನ್ನು ಅಳವಡಿಸಲು ಮಠದ ಆಡಳಿತ ಕಚೇರಿಯ ಹಿಂದೆ ಇರುವ ಖುಲ್ಲಾ ಜಾಗೆ ನೀಡಲಾಗುತ್ತಿದೆ. ಪಾನಿಪುರಿ ಸೇರಿದಂತೆ ಇತರೆ ಚಾಟ್ ಮಸಾಲಾ ಅಂಗಡಿಗಳನ್ನು ಅಮ್ಯೂಜ್‌ಮೆಂಟ್ ಆಟಿಕೆ ವಸ್ತುಗಳ ಕಡೆಯೇ ಅಳವಡಿಸಲಾಗುತ್ತಿದೆ. ಯಾತ್ರಿ ನಿವಾಸದ ಎದುರಿಗೆ 40 ಅಡಿ ಜಾಗೆ ಖುಲ್ಲಾ ಬಿಟ್ಟು ಭಕ್ತರಿಗೆ ಅಡ್ಡಾಡಲು ಸೇರಿದಂತೆ ಇತರೆ ಬಗೆಯ ಕೆಲಸಗಳಿಗೆ ಖಾಲಿ ಬಿಡಲಾಗುತ್ತಿದೆ.
ಪ್ರಸಾದದ ವ್ಯವಸ್ಥೆಬರುವ ಭಕ್ತರಿಗೆ ಯಾವುದೇ ಬಗೆಯ ಪ್ರಸಾದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹೊಸ ಭೋಜನಾಲಯದಲ್ಲೂ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಶಕ್ತಿ ಯೋಜನೆಯಿಂದ ಅಜ್ಜನ ಜಾತ್ರೆಗೆ ಬರುವವರ ಸಂಖ್ಯೆ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ಟ್ರಸ್ಟ್ ಕಮಿಟಿ ಕೂಡ ತಯಾರಿ ನಡೆಸಿರುವುದಂತೂ ಸತ್ಯ.
ಸಿದ್ಧತೆಶಕ್ತಿ ಯೋಜನೆಯಿಂದ ಮಠಕ್ಕೆ ಬರುವವರ ಸಂಖ್ಯೆ ಸಹಜವಾಗಿ ದುಪ್ಪಟ್ಟು ಆಗಿದೆ. ಜಾತ್ರೆಯಲ್ಲೂ ಪ್ರತಿವರ್ಷಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಬರಲಿದೆ. ಹೀಗಾಗಿ ಅದಕ್ಕೆ ತಕ್ಕಂತೆ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.- ಬಸವರಾಜ ಕಲ್ಯಾಣಶೆಟ್ಟರ್, ಚೇರಮನ್, ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ