ಶಕ್ತಿ ಯೋಜನೆಯಿಂದ ಸ್ತ್ರೀ ಸ್ವಾವಲಂಬಿ ಕನಸು ಸಾಕಾರ: ಶಾಸಕ ಎಚ್‌.ಆರ್‌. ಗವಿಯಪ್ಪ

KannadaprabhaNewsNetwork |  
Published : Jul 15, 2025, 01:00 AM IST
14ಎಚ್‌ಪಿಟಿ1- ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಿದ ಸಂಭ್ರಮಾಚರಣೆಯಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮಹಮ್ಮದ್‌ ಇಮಾಮ್ ನಿಯಾಜಿ ಮತ್ತಿತರರಿದ್ದರು. | Kannada Prabha

ಸಾರಾಂಶ

ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ 500 ಕೋಟಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿರುವುದು ಸ್ತ್ರೀ ಸ್ವಾವಲಂಬಿ ಕನಸು ನನಸಾಗಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ವಿಜಯನಗರ ಜಿಲ್ಲೆಯಲ್ಲಿ 7.28 ಕೋಟಿ ಉಚಿತ ಪ್ರಯಾಣ । ಗ್ಯಾರಂಟಿ ಯೋಜನೆ ಯಶಸ್ವಿಗೆ ಸಂಭ್ರಮಾಚರಣೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ 500 ಕೋಟಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿರುವುದು ಸ್ತ್ರೀ ಸ್ವಾವಲಂಬಿ ಕನಸು ನನಸಾಗಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಿದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾಗಿ ಮಹಿಳೆಯರನ್ನು ಕೇಂದ್ರವಾಗಿಸಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ನೀಡಿದ್ದ ಭರವಸೆ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯುತ್ತ ಬಂದಿದೆ. ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ಒಟ್ಟು 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಪ್ರಯಾಣದ ಒಟ್ಟು ಮೊತ್ತ ₹12,669 ಕೋಟಿ ಆಗಿದ್ದು, ಶಕ್ತಿ ಯೋಜನೆಗೆ ವಿನಿಯೋಗಿಸಲಾಗಿದೆ. ಶಕ್ತಿ ಯೋಜನೆ ಸಮರ್ಪಕವಾಗಿ ಬಳಕೆಯಾಗಿದೆ. ಸಾರಿಗೆ ಇಲಾಖೆಗೆ ಪರೋಕ್ಷವಾಗಿ ಶಕ್ತಿ ನೀಡಿದ ಯೋಜನೆ ಇದಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಒಟ್ಟು 7.28 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ರಾಜ್ಯ ಸರ್ಕಾರದಿಂದ ಸಾರಿಗೆ ಇಲಾಖೆಗೆ ಶುಲ್ಕ ಭರಿಸುವ ಮೂಲಕ ಯೋಜನೆಯನ್ನು ಸಕ್ರಿಯವಾಗಿಸಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಶಕ್ತಿ ಯೋಜನೆ ಮುಖ್ಯವಾಗಿದೆ. ಯೋಜನೆಯು ಎರಡು ವರ್ಷಗಳ ಪೂರೈಸಿ ಮಹಿಳೆಯರು ಉಚಿತವಾಗಿ 500 ಕೋಟಿ ಉಚಿತವಾಗಿ ಪ್ರಯಾಣಿಸಿ ಲಾಭವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ಘಟಕಗಳಲ್ಲಿ ಬಸ್‌ಗಳನ್ನು ಸಿಂಗರಿಸುವ ಮೂಲಕ ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಪಂಚ ಗ್ಯಾರಂಟಿಗಳನ್ನು ಸಮಪರ್ಕವಾಗಿ ಜನರಿಗೆ ತಲುಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ರಾಜ್ಯದ ಎಲ್ಲಾ ಸಚಿವರು ಶ್ರಮಿಸಿದ್ದಾರೆ. ಶಕ್ತಿ ಯೋಜನೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಿ ಮಹಿಳೆಯರು ಸೇರಿದಂತೆ ವಯೋವೃದ್ಧರು, ಬಡ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.

ಈ ವೇಳೆ ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮಹಮ್ಮದ್‌ ಇಮಾಮ್ ನಿಯಾಜಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದ ನಿಯಾಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ವಿಭಾಗೀಯ ತಾಂತ್ರಿಕ ಅಧಿಕಾರಿ ಜಿ.ನಾಗರಾಜ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’