ಶಿಕ್ಷಣ, ಆರೋಗ್ಯಕ್ಕೆ ಶಾಮನೂರು ಕುಟುಂಬ ಕೊಡುಗೆ ಅಪಾರ

KannadaprabhaNewsNetwork |  
Published : Mar 09, 2024, 01:34 AM IST
7ಕೆಡಿವಿಜಿ10-ದಾವಣಗೆರೆಯಲ್ಲಿ ಎಸ್ಸೆಸ್ ಕೇರ್ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಸಿರಿಗೆರೆ ಶ್ರೀಗಳ ಸಾನಿಧ್ಯದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾವಣಗೆರೆ ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ ಕೇರ್ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಸಂಸಾಧನ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಿಕ್ಷಣ ಮತ್ತು ಆರೋಗ್ಯ ಯಾವುದೇ ದೇಶದಲ್ಲಿ ಉತ್ತಮವಾಗಿ ದೊರೆತರೆ ಅಂತಹ ದೇಶ, ಸಮಾಜ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬ ಅಂತಹ ಕೆಲಸ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಿವರಾಜ ಪಾಟೀಲ್ ಶ್ಲಾಘಿಸಿದರು.

ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ ಕೇರ್ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಸಂಸಾಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ಶಿಕ್ಷಣ ಹಾಗೂ ಎಸ್ಸೆಸ್ ಕೇರ್ ಟ್ರಸ್ಟ್ ಮೂಲಕ ಆರೋಗ್ಯ ನೀಡುವ ಕೆಲಸವನ್ನು ಶಾಮನೂರು ಮತ್ತು ಕುಟುಂಬ ವರ್ಗ ಮಾಡುತ್ತಿದೆ ಈ ಸೇವೆ ಹೀಗೆಯೇ ನಿರಂತರ ಸಾಗಲಿ ಎಂದು ಶಿವರಾಜ ಪಾಟೀಲ್ ಹಾರೈಸಿದರು.

ವ್ಯವಸ್ಥಾಪಕ ಟ್ರಸ್ಟಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆಯ ಎಲ್ಲಾ ಖಾಸಗಿ, ಸರ್ಕಾರಿ ಆರೋಗ್ಯ ವ್ಯವಸ್ಥೆ ಬಳಸಿಕೊಂಡು, ಇಡೀ ಜಿಲ್ಲೆ ಯನ್ನು ಆರೋಗ್ಯಪೂರ್ಣವಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಆಗ ಶ್ರಮಿಕ ವರ್ಗ, ಬಡವರು ಮನೆ, ನಿವೇಶನಕ್ಕಾಗಿ ಮನವಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಸಹಕಾರದಿಂದ 7 ಸಾವಿರ ಆಶ್ರಯ ಮನೆ ಕಟ್ಟಿ, ಬಡವರಿಗೆ ಹಂಚಿಕೆ ಮಾಡಿದ್ದೆವು ಎಂದರು.

ಹಮಾಲರು, ಇತರೆ ಕಾರ್ಮಿಕರು, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಎಸ್ಸೆಸ್ ಕೇರ್ ಟ್ರಸ್ಟ್ ಸ್ಥಾಪಿಸಿ, ಉಚಿತ ಆರೋಗ್ಯ ತಪಾಸಣೆ, ಡಯಾಲಿಸಿಸ್‌, ಕ್ಯಾನ್ಸರ್ ತಡೆ ಸೇರಿದಂತೆ ಅನೇಕ ಆರೋಗ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಾಪೂಜಿ ವಿದ್ಯಾಸಂಸ್ಥೆಯ ಅಂತರ್ಜಾಲ ತಾಣವನ್ನು ಸಂಸ್ಥೆ ಗೌರವ ಕಾರ್ಯದರ್ಶಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಟ್ರಸ್ಟ್ ನ ಟ್ರಸ್ಟಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಡಾ.ಪ್ರಭಾ ಮಲ್ಲಿಕಾರ್ಜುನ, ಅಥಣಿ ಎಸ್.ವೀರಣ್ಣ, ಕಿರುವಾಡಿ ಗಿರಿಜಮ್ಮ, ಎಸ್ಸೆಸ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ್‌ ಇತರರು ಇದ್ದರು. ಅಗತ್ಯ ಇದ್ದವರಿಗೆ ಟ್ರಸ್ಟ್‌ ಸ್ಪಂದನೆ: ಡಾ.ಪ್ರಭಾ

ದಾವಣಗೆರೆಯಲ್ಲಿ 2019ರಲ್ಲಿ ಎಸ್ಸೆಸ್ ಕೇರ್ ಟ್ರಸ್ಟ್ ಸ್ಥಾಪಿಸಲಾಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಸಮುದಾಯದ ಎಲ್ಲಾ ಜನರಿಗೆ ಉತ್ತಮ ಆರೋಗ್ಯ ನೀಡಲಾರಂಭಿಸಿದೆವು. ಆರೋಗ್ಯ ತಪಾಸಣೆ ವೇಳೆ ಅನೇಕ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪತ್ತೆಯಾಯಿತು. ಕೆಲವರಿಗೆ ಗರ್ಭಕೋಶದ ಕ್ಯಾನ್ಸರ್‌, ಮಕ್ಕಳಲ್ಲಿ ಅಪೌಷ್ಟಿಕತೆ ಹೀಗೆ ನಾನಾ ಸಂಗತಿ ಕಂಡು ಬಂದವು. ಅಗತ್ಯ ಇರುವವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಟ್ರಸ್ಟ್‌ನಿಂದ ಇದೇ ರೀತಿ ಸೇವಾ ಕಾರ್ಯವು ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪನವರ ಮಾರ್ಗದರ್ಶನದಲ್ಲಿ ನಡೆಯಲಿವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.ಟ್ರಸ್ಟ್‌ಗೆ ಮತ್ತೆ ₹ 10 ಕೋಟಿ ಕೊಡ್ತಿನಿ: ಎಸ್ಸೆಸ್ ಘೋಷಣೆ

ಹಣವನ್ನು ಯಾರೂ ತಿನ್ನಲು ಸಾಧ್ಯವಿಲ್ಲ. ಜನರಿಗೆ ಸಹಾಯ ಮಾಡಿದರೆ ಮಾನವೀಯ ನೆಲೆಯಲ್ಲಿ, ಒಂದೊಳ್ಳೆಯ ಸಮಾಜ ಸೇವೆ ಮಾಡಿದಂತಾಗುತ್ತದೆ. ಎಸ್ಸೆಸ್ ಕೇರ್ ಟ್ರಸ್ಟ್‌ಗೆ 10 ಕೋಟಿ ಠೇವಣಿ ಇಟ್ಟು, ಅದಕ್ಕೆ ಬರುವ ಬಡ್ಡಿ ಹಣದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿತ್ತು. ಈಗ ಮತ್ತೆ 10 ಕೋಟಿ ಠೇವಣಿ ಇಡುತ್ತೇನೆ. ಒಟ್ಟು 20 ಕೋಟಿ ರು. ಹಣದಿಂದ ಬರುವ ಬಡ್ಡಿಯಲ್ಲಿ ಜನರಿಗೆ ಮತ್ತಷ್ಟು ಉತ್ತಮ ಸೇವೆ ಒದಗಿಸಲು ನಿರ್ಧರಿಸಿದ್ದೇನೆ. ಟ್ರಸ್ಟ್‌ನ ಮಾನವೀಯ ಕಾರ್ಯಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಎಸ್ಸೆಸ್ ಕೇರ್ ಟ್ರಸ್ಟ್ ಸಂಸ್ಥಾಪಕರಾದ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ