ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಹಿಂದೆಂದೂ ಕಾಣದ ಭೀಕರ ಬರಗಾಲ ರಾಜ್ಯಕ್ಕೆ ಎದುರಾಗಿದ್ದು, 223 ತಾಲೂಕುಗಳ ಜನತೆ ತೀವ್ರ ಸಂಕಷ್ಟಕ್ಕೆಈಡಾಗಿದ್ದರೂ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ರಾಜ್ಯದ ಬಗ್ಗೆ ಧ್ವನಿ ಎತ್ತದೆ ಮೋದಿಯವರಿಗೆ ಸಲಾಂ ಹೊಡೆಯುವ ಶಿವಮೊಗ್ಗ ಎಂಪಿ ಸೇರಿ ರಾಜ್ಯದ ಕೋಲೆ ಬಸವನಂತಹ ಎಂಪಿಗಳಿಗೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಆರೋಪಿಸಿದರು.ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರ ಪರಿಹಾರದ ಬಗ್ಗೆ ಸಮೀಕ್ಷೆ ನಡೆಸಿರುವ ಕೇಂದ್ರ ಪರಿಶೀಲನಾ ಸಮಿತಿ 39,740 ಕೋಟಿ ರು. ಹಾನಿಯ ವರದಿ ನೀಡಿದೆ. ರಾಜ್ಯ ಸರ್ಕಾರ ಕೇಳಿರುವ 18,300 ಕೋಟಿಯ ಬದಲಿಗೆ ಕೇಂದ್ರ ಸರ್ಕಾರ ಕೇವಲ 3,500 ಕೋಟಿ ಅನುದಾನವನ್ನು ನೀಡಿದೆ. ಮತದಾರರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದರು.
ಮಹಾರಾಷ್ಟ್ರದ ನಂತರ ಅತೀ ಹೆಚ್ಚು ತೆರಿಗೆ ನೀಡುವ ನಮಗೆ 100 ರು.ಗಳಿಗೆ ಕೇವಲ 13 ರು. ಅನುದಾನ ನೀಡಿ ಬಿಜೆಪಿ ಅಡಳಿತದ ಯುಪಿ, ಗುಜರಾತ್ ಮುಂತಾದ ರಾಜ್ಯಗಳಿಗೆ ಸಂಗ್ರಹವಾದ ತೆರಿಗೆಯ 5 ಪಟ್ಟು ಅಧಿಕ ಅನುದಾನವನ್ನು ನೀಡಲಾಗುತ್ತಿದೆ. ಹೀಗಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದು ಬಿಜೆಪಿ ಎಂದೂ ವಾಗ್ದಾಳಿ ನಡೆಸಿದರು.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ದೇಶದ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಸಂಪೂರ್ಣ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ರೀತಿ ಆಡಳಿತ ನಡೆಸಿರುವ ಬಿಜೆಪಿ ದುರಾಡಳಿತದ ಪರಿಣಾಮವಾಗಿ ದೇಶದ ಯುವಕರ ಮತ್ತು ಶ್ರೀ ಸಾಮಾನ್ಯರ ಬದುಕು ಸಂಕಷ್ಟಕ್ಕೀಡಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗೆ ಶಾಶ್ವತವಾಗಿ ತಡೆಯೊಡ್ಡುವ ಅಗತ್ಯವಿದೆ ಎಂದರು.
ದೇಶದ ಹಸಿವಿನ ಸೂಚ್ಯಂಕ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಿಗಿಂತಲೂ ಮೇಲಿದೆ. ಬಿಜೆಪಿ ಶ್ರೀಮಂತರ ಕೈಗೊಂಬೆಯಂತೆ ಆಡಳಿತ ನಡೆಸುತ್ತಿದ್ದು ಒಂದು ದೇಶ ಒಂದು ಚುನಾವಣೆಯ ಹಿಡನ್ ಅಜೆಂಡಾವನ್ನು ಹೊಂದಿದೆ. ಬಡವರ ವಿರೋಧಿಯಾಗಿರುವ ಮತ್ತು ಜಾತಿಧರ್ಮದ ಹೆಸರಿನಲ್ಲಿ ದೇಶದ ಏಕತೆಗೆ ಸಂಕಷ್ಟವನ್ನು ತಂದೊಡ್ಡಿರುವ ಬಿಜೆಪಿ ಕಿತ್ತೊಗೆಯಬೇಕಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಂತೆ ನಡೆದುಕೊಂಡಿದೆ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಅಕ್ರಮವಾಗಿ ಸಂಗ್ರಹಿಸಲಾದ ಪಿಎಂ ಕೇರ್ ಫಂಡಿನ ಸಾವಿರಾರು ಕೋಟಿ ಹಣವನ್ನು ವೆಚ್ಚ ಮಾಡಿ ಬಿಜೆಪಿ ಈ ಚುನಾವಣೆ ಗೆಲ್ಲುವ ಹವಣಿಕೆ ನಡೆಸಿದೆ. ಆದರೆ ಜನತೆ ಜಾಗೃತರಾಗಿದ್ದು ರಾಜ್ಯದಲ್ಲಿ 17 ಕ್ಕಿಂತ ಹೆಚ್ಚು ಸ್ಥಾನವನ್ನು ಗಳಿಸುವುದು ಖಚಿತ ಎಂದೂ ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತಿಪಟೂರು ಶಾಸಕ ಷಡಾಕ್ಷರಿ, ಮಾಜಿ ಶಾಸಕ ಕಡಿದಾಳು ದಿವಾಕರ್, ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಗೀತಾ ರಮೇಶ್ ಇದ್ದರು.