ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ದೇಶಕಂಡ ವೀರಸೇನಾನಿ, ಸಮಯ ಪಾಲಕ, ಅತ್ಯುನ್ನತ್ತ ದೇಶಪ್ರೇಮಿಯಾಗಿದ್ದರು ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಶ್ಲಾಘಿಸಿದ್ದಾರೆ.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜನ್ಮ ದಿನನ ಪ್ರಯುಕ್ತ ಅವರು ಶನಿವಾರಸಂತೆಯಲ್ಲಿ ಜನಿಸಿದ ನಿವಾಸದಲ್ಲಿ (ಈಗ ಸಾರ್ವಜನಿಕ ಗ್ರಂಥಾಲಯ) ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ತಂದೆ ಕೋದಂಡೇರ ಮಾದಪ್ಪ ಶನಿವಾರಸಂತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಜನಿಸಿದರು. ಕೆಲವು ವರ್ಷ ಇಲ್ಲಿನ ಪರಿಸರದಲ್ಲಿ ಬಾಲ್ಯ ಕಳೆದರು. ನಂತರ ಕಾರ್ಯಪ್ಪ ಪೋಷಕರು ಬೇರೆ ಕಡೆಗೆ ವರ್ಗಾವಣೆಗೊಂಡರು. ವಿದ್ಯಾಭ್ಯಾಸ ಪೂರೈಸಿದ ನಂತರ ಕಾರ್ಯಪ್ಪ ಸೇನೆಗೆ ಸೇರಿದರು ಎಂದು ಸ್ಮರಿಸಿದರು.ಹಂತಹಂತವಾಗಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಅತ್ಯುನ್ನತ ಹುದ್ದೆಗೇರಿದರು. 1948ರ ಪಾಕ್ ಜೊತೆಗಿನ ಯುದ್ಧದಲ್ಲಿ ಸೈನ್ಯದ ಮುಂದಾಳತ್ವ ವಹಿಸಿ ಯುದ್ಧದಲ್ಲಿ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. 1962ರಲ್ಲಿ ನಡೆದ ಚೀನಾ ವಿರುದ್ಧದ ಯುದ್ಧದ ವೇಳೆ ಅವರು ನಿವೃತ್ತರಾಗಿದ್ದರೂ, ದೇಶಕ್ಕೆ ಸೇವೆ ಸಲ್ಲಿಸಲು ಮತ್ತೆ ಅವಕಾಶ ಕೊಡುವಂತೆ ಸರ್ಕಾರ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು ಎಂದು ಸ್ಮರಿಸಿದರು. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ವೇರ ಸೇನಾನಿ ಕಾರ್ಯಪ್ಪ ಅವರಲ್ಲಿದ್ದ ದೇಶಪ್ರೇಮ, ಶಿಸ್ತು ನಿಯಮ, ಸಮಯ ಪಾಲನೆ ಇವುಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್ ಕಾರ್ಯಪ್ಪ ವೀರಸೇನಾನಿಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.ನಿವೃತ್ತ ಸೈನಿಕರಾದ ಮಿಲ್ಟ್ರಿ ನಾಗರಾಜ್, ಬೆಳ್ಳಿಯಪ್ಪ, ಪಿ.ಡಿ.ಒ ಹರೀಶ್, ಸಾಹಿತಿ ನಯನತಾರ ಪ್ರಕಾಶ್ಚಂದ್ರ, ಕಾರ್ಯಕ್ರಮ ಆಯೋಜನೆ ಮಾಡಿದ ಕಾರ್ಯಪ್ಪ ಅಭಿಮಾನಿ ಬಳಗದ ಬಿಲಾಲ್ ಅಮೀರ್‌ಜಾನ್, ಆರೋಗ್ಯ ಇಲಾಖೆಯ ಮುತ್ತಪ್ಪ, ಆಟೋ ಚಾಲಕರ ಸರ್ಂದ ಸತ್ಯ ಮುಂತಾದವರು ಹಾಜರಿದ್ದರು.
ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಕಾರ್ಯಪ್ಪ ಅವರು ಜನಿಸಿದ ಮನೆಯ ಪರಿಸರ ಸ್ವಚ್ಛಗೊಳಿಸಿದರು.