ಕನ್ನಡಪ್ರಭಾ ವಾರ್ತೆ ಶನಿವಾರಸಂತೆ
ಹಳೆ ವಿದ್ಯಾರ್ಥಿಗಳು ಪಾಠ ಮಾಡಿದ ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಜೊತೆಯಲ್ಲಿ ಗುರುಗಳು ಕಷ್ಟ ಎದುರಿಸುವ ಸಂದರ್ಭದಲ್ಲಿ ಅವರಿಗೆ ನೆರವು ಮತ್ತು ಸೇವೆ ಒದಗಿಸುವ ಮೂಲಕ ಸಾರ್ಥಕತೆ ಹೊಂದಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟಿದ್ದಾರೆ.ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಇಲ್ಲಿನ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆಯ ಪ್ರೌಢ ಮತ್ತು ಪ.ಪೂ.ಕಾಲೇಜು ವಿಭಾಗದಲ್ಲಿ 1983 ರಿಂದ 1995 ರ ಸಾಲಿನ ಹಳೆಯ ವಿದ್ಯಾರ್ಥಿಗಳು ಸಹಪಾಠಿ ಸ್ನೇಹಿತರ ಬಳಗ ವತಿಯಿಂದ ಪಾಠ ಮಾಡಿದ ಗುರುಗಳಿಗೆ ಮತ್ತು ಸಾಧಕರಿಗಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರುಗಳನ್ನು ಸ್ಮರಿಸಿ ಅವರಿಗೆ ಗೌರವ ನೀಡುವುದು ಶಿಷ್ಯಂದಿರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಬದಲಾಗಿದೆ. ಹಿಂದೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸಿ ಸರಿದಾರಿಗೆ ತರುತ್ತಿದ್ದರು. ಆದರೆ ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಕರು ಶಿಕ್ಷಿಸದೆ ಪಾಠ ಮಾಡುವಂತೆ ತಾಕೀತು ಮಾಡುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದರು.ನಿವೃತ್ತ ದೈಹಿಕ ಶಿಕ್ಷಕ ಎಂ.ಜಿ.ದೇವಯ್ಯ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮತ್ತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂಬ ಉದ್ದೇಶದಿಂದ ಗುರುಗಳು ದಂಡಿಸುತ್ತಾರೆ. ಯಾವತ್ತೂ ಗುರುಗಳು ಶಿಷ್ಯಂದಿರ ಒಳಿತು ಬಯಸುತ್ತಾರೆ ಎಂದರು.
ಹಿರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್.ಸುಬ್ಬಯ್ಯ ಮಾತನಾಡಿ, ಪ್ರತಿಯೊಬ್ಬರೂ ಗುರು ಋಣ ಮತ್ತು ಪಿತೃಋಣ ಸ್ಮರಿಸಿದರೆ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.ನಿವೃತ್ತ ಶಿಕ್ಷಕಿ ರತಿ ಮಾತನಾಡಿ, ಪಾಠ ಮಾಡಿದ ಗುರುಗಳಿಗೆ ಶಿಷ್ಯಂದಿರು ಗುರುವಂದನೆ ಸಲ್ಲಿಸುವುದು ಬದುಕಿನ ಕೊನೆಯ ಕ್ಷಣದ ವರೆಗೂ ಅವೀಸ್ಮಣೀಯವಾಗಿರುತ್ತದೆ ಎಂದರು.
ಪ್ರೌಢಶಾಲಾ ವಿಭಾಗದ ನಿವೃತ್ತ ಶಿಕ್ಷಕ ಎಸ್.ಪಿ.ರಾಜು ಮಾತನಾಡಿ, ತಮ್ಮಿಂದ ಪಾಠ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಏಳಿಗೆಯನ್ನು ಕಂಡಾಗ ಗುರುಗಳು ಅತ್ಯಂತ ಸಂಭ್ರಮ ಪಡುತ್ತಾರೆ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಆರೋಗ್ಯ ಕಾಪಾಡಿಕೊಂಡು ಸುಖಿ ಜೀವನ ನಡೆಸುವಂತೆ ಮಾರ್ಗದರ್ಶನ ನೀಡಿದರು.ನಿವೃತ್ತ ಪ್ರಾಂಶುಪಾಲ ಎಂ.ಆರ್.ನಿರಂಜನ್ ಮಾತನಾಡಿ, ವಿದ್ಯಾಭ್ಯಾಸ ಮುಗಿದ ನಂತರವೂ ವಿದ್ಯಾರ್ಥಿಗಳು ಲವಲವಿಕೆಯಿಂದ ಇರಬೇಕು ಎಂದರು.
ಶನಿವಾರಸಂತೆ ಸಿಆರ್‌ಪಿ ಸಿ.ಕೆ.ದಿನೇಶ್ ಹಳೆ ವಿದ್ಯಾರ್ಥಿಗಳ ಪರವಾಗಿ ಹಳೆ ವಿದ್ಯಾರ್ಥಿ ಮತ್ತು ಉಪನ್ಯಾಸಕ ಕೆ.ಪಿ.ಜಯಕುಮಾರ್ ಮಾತನಾಡಿದರು.ನಿವೃತ್ತ ಶಿಕ್ಷಕರಾದ ಸಿ.ಎಲ್.ಸುಬ್ಬಯ್ಯ, ಡಿ.ಎಸ್.ರುಕ್ಮಿಣಿ, ದೊಡ್ಡಯ್ಯ, ಶಕುಂತಲಾ, ಹೇಮಾವತಿ, ವಿ.ಕೆ.ರತಿ, ನಾಗರತ್ನ, ಉತ್ತಪ್ಪ, ಜಿ.ಕೆ.ಲಕ್ಷ್ಮಿನಾರಾಯಣ ಭಟ್, ಎಸ್.ಪಿ.ರಾಜು, ಜಿ.ಬಿ.ನಾಗಪ್ಪ, ಎಂ.ಜಿ.ದೇವಯ್ಯ, ಶ.ಗ.ನಯನತಾರ, ಎಂ.ಎನ್.ಮಲ್ಲಿಕಾರ್ಜುನ, ವೇಣುಗೋಪಾಲ್, ಎಂ.ಆರ್.ನಿರಂಜನ್, ಎಚ್.ಎ.ದೇವರಾಜ್, ಎಚ್.ಕೆ.ರಾಮನಂಜಯ್ಯ, ಎಚ್.ಸಿ.ಮಲ್ಲೇಶ್, ಡಿ.ರವಿಕುಮಾರ್ ಅವರನ್ನು ಗೌರವಿಸಲಾಯಿತು.
ಸಾಧಕರಾದ ಡಾ.ಪುಟ್ಟರಾಜು, ನಾಗರಾಜು ಮತ್ತು ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಸಹಪಾಠಿ ಸ್ನೇಹ ಬಳಗದ ವಿನೋದ್‍ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.