- ಶೃಂಗೇರಿ ಶ್ರೀಗಳ ಸನ್ಯಾಸತ್ವ ಸ್ವೀಕಾರಕ್ಕೆ 50ರ ಸಂಭ್ರಮದಲ್ಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಶೃಂಗೇರಿ ಶ್ರೀಗಳು ಸನ್ಯಾಸತ್ವ ಸ್ವೀಕಾರ ಮಾಡಿ 50 ವರ್ಷಗಳ ಸಂದ ಪ್ರಯುಕ್ತ ಶಾಂಕರ ತತ್ವ ಪ್ರಸಾರ ಹಾಗೂ ಕಲ್ಯಾಣ ವೃಷ್ಟಿ ಅಭಿಯಾನ ಆರಂಭಿಸಲಾಗಿದೆ ಎಂದು ಕೆ.ಆರ್.ನಗರ ಯಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ತಿಳಿಸಿದರು. ಮಂಗಳವಾರ ಅಗ್ರಹಾರದಲ್ಲಿರುವ ಅನ್ನಪೂರ್ಣಮ್ಮ ಮತ್ತು ರಂಗನಾಥ್ ರಾವ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಾಂಕರ ತತ್ವ ಪ್ರಸಾರ ಅಭಿಯಾನ ಹಾಗೂ ಕಲ್ಯಾಣ ವೃಷ್ಟಿ ಸಮರ್ಪಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶೃಂಗೇರಿ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ವೇದಾಧ್ಯಯನ ಮತ್ತು ಶಾಸ್ತ್ರಾಧ್ಯಯನ ಮಾಡಿದ ರೀತಿ ಅದ್ಭುತವಾಗಿದೆ. ಸನ್ಯಾಸತ್ವದ ಎಲ್ಲಾ ಧರ್ಮಗಳನ್ನು ಪಾಲಿಸಿಕೊಂಡು ಬಂದವರು. ಶೃಂಗೇರಿ ಶ್ರೀಗಳು 70 ವರ್ಷವಾದರೂ ಅಧ್ಯಯನ, ಅಧ್ಯಾಪನವನ್ನು ಬಿಟ್ಟಿಲ್ಲ. ಅವರು ಸನ್ಯಾಸತ್ವ ಸ್ವೀಕರಿಸಿದ 50 ವರ್ಷಗಳ ಬಗ್ಗೆ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಶಾಂಕರ ತತ್ವ ಅಭಿಯಾನ ಆರಂಭಿಸಲಾಗಿದೆ ಎಂದರು.ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 50 ಸಾವಿರ ಜನರು ಕಲ್ಯಾಣ ವೃಷ್ಟಿತೋತ್ಸವ ಸ್ತೊತ್ರದ ಬಗ್ಗೆ ಪಾರಾಯಣ ಮಾಡಿ ನವೆಂಬರ್ 10ರೊಳಗೆ ಶೃಂಗೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮರ್ಪಣೆ ಮಾಡಬೇಕು. ಪುರುಷರು ಪಾರಾಯಣ ಮಾಡುವಂತೆ ಪ್ರೇರಿಪಿಸಬೇಕು ಎಂದು ಕರೆನೀಡಿದರು.
ಶಾಂಕರ ತತ್ವ ಅಭಿಯಾನದ ತಾಲೂಕು ಸಂಚಾಲಕ ಎನ್. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣವೃಷ್ಟಿತೋತ್ಸವ ಪಾರಾಯಣ ಮಾಡಿರುವವರು ಸ್ವಾಮೀಜಿ ಸಮ್ಮುಖದಲ್ಲಿ ಸಮರ್ಪಣೆ ಮಾಡಿಕೊಂಡು ಆಶೀರ್ವಾದ ಪಡೆದುಕೊಳ್ಳಬೇಕು. ಶೃಂಗೇರಿ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ 50ವರ್ಷಗಳ ಮಹೋತ್ಸವದ ಅಂಗವಾಗಿ ಎಲ್ಲಾ ಶಿಷ್ಯಂದಿರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.ಶಾಂಕರ ತತ್ವ ಅಭಿಯಾನದ ಜಿಲ್ಲಾ ಅಧ್ಯಕ್ಷ ರಾಮಪ್ರಸಾದ್, ಕೊಪ್ಪದ ಸಹ ಸಂಚಾಲಕ ರವಿ ಪಟವರ್ಧನ್, ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಇದ್ದರು. ಪುರೋಹಿತರಾದ ಪ್ರಸನ್ನ ಐತಾಳ್, ಜಗದೀಶ್ ಭಟ್ ವೇದ ಘೋಷ ಮಾಡಿದರು. ವಾಸಂತಿ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.