ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ೬೬ನೇ ಮಹಾರಥೋತ್ಸವ

KannadaprabhaNewsNetwork | Published : Jan 17, 2025 12:45 AM

ಸಾರಾಂಶ

ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಾಲಯದ ೬೬ನೇ ವರ್ಷದ ಮಹಾರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು. ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ಧೂರಿಯ ರಥೋತ್ಸವಕ್ಕೆ ಸಾಗಿತು. ಕುಟುಂಬಸ್ಥರು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಾಲಯದ ೬೬ನೇ ವರ್ಷದ ಮಹಾರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.

ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪ್ರಮುಖರಾದ ಬಿ.ಬಿ.ಸತೀಶ್, ಬಿ.ಇ.ಜಯೇಂದ್ರ, ಸಜನ್ ಮಂದಣ್ಣ, ಕೆ.ಪಿ. ಚಂಗಪ್ಪ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಸೇರಿದಂತೆ ಗ್ರಾಮದ ಪ್ರಮುಖರು ರಥ ಎಳೆಯುವ ಮೂಲಕ ಚಾಲನೆ ನೀಡಿದರು.

ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ಧೂರಿಯ ರಥೋತ್ಸವಕ್ಕೆ ಸಾಗಿತು. ಕುಟುಂಬಸ್ಥರು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ದಾರಿಯ ಇಕ್ಕೆಲಗಳಲ್ಲೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ರಥೋತ್ಸವ ವೀಕ್ಷಿಸಿದರು.

ಶಾಂತಳ್ಳಿ ಹೋಬಳಿಗೆ ಸೇರಿದ ಕುಟುಂಬಗಳಿಗೆ ಕುಮಾರಲಿಂಗೇಶ್ವರ ಸ್ವಾಮಿ ಆರಾಧ್ಯ ದೇವರು. ಪ್ರತಿಯೊಬ್ಬರ ಮನೆಯಲ್ಲೂ ಮನೆ ದೇವರಾಗಿ ಕುಮಾರಲಿಂಗೇಶ್ವರನನ್ನೇ ಪೂಜಿಸುತ್ತಾರೆ. ವರ್ಷಂಪ್ರತಿ ಜನವರಿಯಲ್ಲಿ ಎರಡನೇ ವಾರದಲ್ಲಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ಗುರು ಹಿರಿಯರ ಅಪೇಕ್ಷೆಯಂತೆ ಕಳೆದ ೬ ದಶಕಗಳಿಂದ ಪ್ರತಿವರ್ಷ ರಥೋತ್ಸವ ಮತ್ತು ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಬೆಟ್ಟದಳ್ಳಿ, ಹರಗ, ಯಡೂರು, ಕೂತಿ ಅಬ್ಭಿಮಠ ಬಾಚಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕುಮಾರಳ್ಳಿ, ಕೊತ್ತನಳ್ಳಿ, ತಲ್ತಾರೆಶೆಟ್ಟಳ್ಳಿ, ಕುಂದಳ್ಳಿ, ಜಕ್ಕನಳ್ಳಿ, ಬಸವನಕಟ್ಟೆ ಗ್ರಾಮಗಳ ಗ್ರಾಮಸ್ಥರು ಪೂಜೋತ್ಸವದಲ್ಲಿ ಭಾಗವಹಿಸಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಅನ್ನದಾನ ನಡೆಯಿತು. ತೋಟಗಾರಿಕೆ, ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ ನಡೆಯಿತು. ಗ್ರಾಮಸ್ಥರು ಬೆಳೆ ವಿಶೇಷ ತರಕಾರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಗ್ರಾಮೀಣ ಜನರು ತಾವು ಉತ್ಪಾದಿಸಿದ ಗುಣಮಟ್ಟದ ಜೇನು ತಂದು ಮಾರಾಟ ಮಾಡಿದರು.

ಕ್ರೀಡಾಕೂಟ: ಮಹಾರಥೋತ್ಸವ ಅಂಗವಾಗಿ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟಗಳು ನಡೆದವು.

ಸಮಾರೋಪ: ಶುಕ್ರವಾರ ಅಪರಾಹ್ನ ೩ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಎನ್. ಶಾಂತಪ್ಪ, ಡಿ.ಎಸ್. ಲಿಂಗರಾಜು, ಕೆ.ಕೆ. ಲಿಂಗರಾಜು, ಕೆ.ಎಸ್. ಜಯಾರಾಮ್, ಆಲ್ಪರ್ಟ್ ಅವರನ್ನು ಸನ್ಮಾನಿಸಲಾಗುತ್ತದೆ.

Share this article