ಕನ್ನಡಪ್ರಭವಾರ್ತೆ ಹಾಸನ
ಅರಸೀಕೆರೆ ತಾಲೂಕಿನ ಹಿರಿಯ ಪತ್ರಕರ್ತರು ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಶಾಂತಕುಮಾರ್ (೫೯ ವರ್ಷ) ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮೊದಲು ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ನಂತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಮಾತನಾಡಿ, ಶಾಂತಕುಮಾರ್ ಅವರ ನಿಧನ ಜಿಲ್ಲಾ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ತಮ್ಮ ಕೆಲಸದಲ್ಲಿ ಎಂದು ರಾಜಿಯಾಗದೆ ಪ್ರಾಮಾಣಿಕ ವೃತ್ತಿ ಜೀವನ ನಡೆಸಿದ್ದರು. ಶಾಂತಕುಮಾರ್ ಅವರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಲಿಲ್ಲ, ಒತ್ತಡದ ನಮ್ಮ ವೃತ್ತಿ ಜೀವನದಲ್ಲಿ ಎಲ್ಲರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಮಂಜುನಾಥ್ ಮಾತನಾಡಿ, ಮೂರು ದಶಕಗಳಿಂದ ಶಾಂತಕುಮಾರ್ ಅವರು ವರದಿಗಾರರಾಗಿ ಹಾಗೂ ಪತ್ರಿಕೆ ಏಜೆಂಟರಾಗಿ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಶ್ರಮಜೀವಿ ಹಾಗೂ ವೃತ್ತಿ ಬದ್ಧತೆಯೊಂದಿಗೆ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದು ಹೇಳಿದರು.ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನ ಕುಮಾರ್ ಮಾತನಾಡಿ, ಶಾಂತಕುಮಾರ್ ಅವರು ಸೌಮ್ಯ ಸ್ವಭಾವದವರಾಗಿದ್ದರು. ತಾಲೂಕು ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಅವರು ಪತ್ರಿಕಾ ವಿತರಕರಾಗಿ ಹಾಗೂ ವರದಿಗಾರರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು, ಅವರು ಆರೋಗ್ಯದ ಕಡೆ ಗಮನ ನೀಡಬೇಕಿತ್ತು, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸಂಘದ ಉಪಾಧ್ಯಕ್ಷ ಎಚ್.ಟಿ ಮೋಹನ್ ಕುಮಾರ್ ಮಾತನಾಡಿ, ಹಲವು ದಶಕಗಳಿಂದ ಕನ್ನಡಪ್ರಭ ಪತ್ರಿಕೆಯ ತಾಲೂಕು ವರದಿಗಾರರಾಗಿ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಸರಳ ವ್ಯಕ್ತಿತ್ವ, ಸೌಮ್ಯ ಸ್ವಭಾವದವರಾಗಿದ್ದ ಅವರು ಕಾರ್ಯ ನಿರತ ಪತ್ರಕರ್ತ ಎಂಬ ಮಾತಿಗೆ ಸ್ಪಷ್ಟ ನಿದರ್ಶನದಂತೆ ಕಾರ್ಯ ನಿರ್ವಹಿಸಿದರು. ಮುಂಜಾನೆ 4ಗಂಟೆಗೆ ಪತ್ರಿಕೆ ವಿತರಣೆಯಿಂದ ಹಿಡಿದು ವರದಿ ಮಾಡುವವರೆಗೂ ವೃತ್ತಿಯಲ್ಲಿ ಸದಾ ತೊಡಗಿಸಿಕೊಂಡಿರುತ್ತಿದ್ದರು ಎಂದು ನೆನೆದರು.ಸಂಘದ ಉಪಾಧ್ಯಕ್ಷ ಕೆ.ಎಂ. ಹರೀಶ್ ಜಿ.ಪ್ರಕಾಶ್, ಆನಂದ್ ಪಟೇಲ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕಾರ್ಯದರ್ಶಿ ಪಿ.ಎ ಶ್ರೀನಿವಾಸ್, ಸಿ.ಬಿ. ಸಂತೋಷ್, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಕಿರಿಯ ಸದಸ್ಯರು ಇದ್ದರು.