ನೈತಿಕ ಶಿಕ್ಷಣ ಮೂಲಕ ಮಕ್ಕಳ ಭವಿಷ್ಯ ರೂಪಿಸಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ - ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Sep 12, 2024, 02:07 AM ISTUpdated : Sep 12, 2024, 11:40 AM IST
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.

 ಶಿಕಾರಿಪುರ :  ಸಮಾಜದಲ್ಲಿ ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿ ದೇಶಕ್ಕಾಗಿ ಬದುಕುವುದನ್ನು ಹೇಳಿಕೊಡಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕಾರಿಪುರ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಮಾಜ ಶಿಕ್ಷಕರಿಂದ ಅತಿ ಹೆಚ್ಚಿನ ನಿರೀಕ್ಷೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ನೈತಿಕ ಶಿಕ್ಷಣದ ಮೂಲಕ ಸಂಸ್ಕಾರಯುತ ಪ್ರಜೆಯನ್ನಾಗಿಸಿ ದೇಶಕ್ಕಾಗಿ ಬದುಕುವುದನ್ನು ಹೇಳಿಕೊಡಬೇಕಾಗಿದೆ ಎಂದ ಅವರು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತ್ಯುತ್ತಮ ಫಲಿತಾಂಶ ಲಭಿಸುವಂತೆ ಹೆಚ್ಚು ಶ್ರಮವಹಿಸುವಂತೆ ತಿಳಿಸಿದರು.

ವಿ.ಪ.ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿಗಳನ್ನು ಸರಿದಾರಿಗೆ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕರ ಮುಂದಿದ್ದು, ಕತ್ತಲೆಯಿಂದ ಬೆಳಕಿನ ಕಡೆ ಕರೆದೊಯ್ಯುವ ಶಿಕ್ಷಕರು ತರಗತಿಯಲ್ಲಿ ಒತ್ತಡಕ್ಕೆ ಒಳಗಾಗದಂತೆ ತಿಳಿಸಿ ಒತ್ತಡ ಮುಕ್ತ ಬದುಕಿಗೆ ಯೋಗನಿದ್ರೆ ಸಹಕಾರಿಯಾಗಿದೆ ಎಂದು ತಿಳಿಸಿದರು. ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಗ್ಯಾರಂಟಿ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು 7ನೇ ವೇತನ ಆಯೋಗದ ವರದಿ ಯಥಾವತ್ ಜಾರಿಗೊಳಿಸಿದ್ದು ಶಿಕ್ಷಕರ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಜಯೇಂದ್ರ ಮಾತನಾಡಿ, ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲದೆ ಸಂಸ್ಕಾರ ರೂಪಿ ಸಲು ಅತ್ಯಂತ ಅವಶ್ಯಕವಾಗಿದೆ. ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದ್ದು, ಕೌಶಲ ಕಲಿಕೆ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವ ರೀತಿಯ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದರು.

ಶಿಕ್ಷಕ ವೃತ್ತಿಯು ಸೇವೆಯಾಗಿದ್ದು, ಮೌಲ್ಯಯುತವಾದ ಶಿಕ್ಷಕ ವೃತ್ತಿಯ ಬಗ್ಗೆ ಸಮಾಜ ಹೆಚ್ಚಿನ ನಿರೀಕ್ಷೆ ಹೊಂದಿದೆ ಪೂರಕವಾಗಿ ಶಿಕ್ಷಕರು ವೃತ್ತಿಯ ಘನತೆಯನ್ನು ಕಾಪಾಡುವಂತೆ ತಿಳಿಸಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಉತ್ತಮವಾಗಿದ್ದು ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸುವಲ್ಲಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಆರ್.ಎಂ.ಘಾಸಿ, ಕೊಟ್ರೇಶ್ವರಪ್ಪ, ಮಾಲತೇಶ್ ಸಂಗ್ರಹದ ನಮ್ಮ ಹೆಮ್ಮೆಯ ಶಿಕಾರಿಪುರ ಪುಸ್ತಕ ಬಿಡುಗಡೆಗೊಳಿಸಲಾಯಿತು.

ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಶೈಲಾ ಮಡ್ಡಿ,ಉಪಾಧ್ಯಕ್ಷೆ ರೂಪ ಮಂಜುನಾಥ್,ತಾ.ಪಂ ಪ್ರಭಾರಿ ಇಒ ಕಿರಣ್ ಕುಮಾರ್ ಹರ್ತಿ, ಬಿಇಒ ಲೋಕೇಶಪ್ಪ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ್, ರಾಜ್ಯ ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಜಿಲ್ಲಾ ಸಂಘದ ಅಧ್ಯಕ್ಷ ರುದ್ರಪ್ಪ, ಗೌರವಾಧ್ಯಕ್ಷ ಬಿ.ಆರ್ ಮಂಜಪ್ಪ, ತಾ ಘಟಕದ ಅಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಚನ್ನೇಶ್, ಎಂ.ಜಿ ಪ್ರಕಾಶ್,ಬಸವನಗೌಡ ಕೊಣ್ತಿ ಮತ್ತಿತರರಿದ್ದರು.

PREV