ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು ಅಕ್ಷರ ಜ್ಞಾನ ನೀಡಿ ಅವರ ಬದುಕನ್ನು ಕಟ್ಟಿಕೊಳ್ಳುವಂತಹ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಶುಕ್ರವಾರ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಕಳೆದ 10 ವರ್ಷಗಳ ಹಿಂದೆ ನನೆಗುದಿಗೆ ಬಿದ್ದಿದ್ದ ವೃಂದ ಮತ್ತು ನೇಮಕಾತಿ ತಿದ್ದುಪಡಿಗೆ ಅವಕಾಶ ನೀಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬಾಳನ್ನು ಬೆಳಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪ್ರತಿ ಶಿಕ್ಷಕರು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಬೇಕು. ನೀವು ಬೋಧನೆ ಮಾಡುವ ವಿಷಯದಲ್ಲಿ ಯಾವ ವಿದ್ಯಾರ್ಥಿಯೂ ಫೇಲಾಗದಂತೆ ಜಾಗ್ರತೆ ವಹಿಸಬೇಕು. ಗುಣಾತ್ಮಕ ಶಿಕ್ಷಣ, ನಿಮ್ಮ ಪರಿಶ್ರಮ ಶಿಕ್ಷಣ ಇಲಾಖೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಹಂತದಲ್ಲೂ ಶಿಕ್ಷಕರು ಶಿಕ್ಷಣ ಇಲಾಖೆಯ ಹಿರಿಮೆ, ಗರಿಮೆಯನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು ಎಂದರು.ನನ್ನ ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದರೂ ಜನಸೇವೆ ಮಾಡುವ ಅವಕಾಶ ಪಡೆದಿದ್ದರೂ ಅಭಿವೃಧ್ಧಿ ದಾಖಲಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದರೂ ಇದರ ಹಿಂದೆ ನನಗೆ ಶಿಕ್ಷಣ ನೀಡಿದ ಗುರುಗಳ ಮಾರ್ಗದರ್ಶನವಿದೆ. ಇಂದಿಗೂ ಅವರನ್ನು ಗೌರವದಿಂದ ನಮಿಸುತ್ತೇನೆ. ಸಮಾಜದಲ್ಲಿ ಯಾವುದೇ ವ್ಯಕ್ತಿ, ಶಕ್ತಿಗೆ ಸಿಗದ ವಿಶೇಷ ಗೌರವ ಶಿಕ್ಷಕರಿಗೆ ಮಾತ್ರ ದೊರೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಸರ್ಕಾರ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಎಲ್ಲಾ ಸೌಲಭ್ಯ ಒದಗಿಸಿದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಪಾಠ ಪ್ರವಚನ ನಡೆಯುವುದಿಲ್ಲವೆಂಬ ಪೋಷಕರ ನಿಲುವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಿಗೆ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಚಳ್ಳಕೆರೆ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಸದಾಕಾಲ ಶಿಕ್ಷಕರಿಗೆ, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಶಾಸಕ ಟಿ.ರಘುಮೂರ್ತಿ ಶಿಕ್ಷಣವನ್ನು ಕಟ್ಟಿ ಬೆಳೆಸುವ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಎಂದರು.ಸುಮಾರು 3 ಕೋಟಿ ರು. ಗೂ ಹೆಚ್ಚು ಹಣವನ್ನು ಶಿಕ್ಷಣ ಇಲಾಖೆ ನೀಡಿ ನೂರು ಹೊಸ ಕೊಠಡಿ ನಿರ್ಮಾಣ, ರಿಪೇರಿ ಹಾಗೂ ಇನ್ನಿತರೆ ಸೌಲಭ್ಯಗಳಿಗೆ ಸಹಕಾರ ನೀಡಿದ್ದಾರೆ. ಚಳ್ಳಕೆರೆ ತಾಲೂಕಿಗೆ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು, ಉದ್ಯೋಗವಾಶ ಕಲ್ಪಿಸುವ ಜಿಟಿಟಿಸಿ ಮುಂತಾದ ವೃತ್ತಪರ ಶಿಕ್ಷಣ ಪ್ರಾರಂಭಿಸುವ ಮೂಲಕ ಚಳ್ಳಕೆರೆ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಬಲ ತುಂಬಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಂದರ್ಭದಲ್ಲೂ ನಮ್ಮೊಡನೆ ಸದಾಕಾಲ ವಿದ್ದು, ಶಿಕ್ಷಣ ಅಭಿವೃದ್ಧಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಕ್ಷೇತ್ರದ ಶೈಕ್ಷಣಿಕ ಸಾಧನೆಗೆ ಶಾಸಕರ ಕೊಡುಗೆ ಅಪಾರ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭೆ ಅಧ್ಯಕ್ಷ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾ ಬೋರಯ್ಯ ಮಾತನಾಡಿದರು.ಅಕ್ಷರ ದಾಸೋಹ ಅಧಿಕಾರಿ ಜಿ.ಟಿ.ಮಂಜುನಾಥ ಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಸುಮ ಭರಮಣ್ಣ, ಸುಜಾತ ಪ್ರಹ್ಲಾದ್, ಕವಿತಾ ವೀರೇಶ್, ನಾಮಿನಿ ಸದಸ್ಯರಾದ ಬಡಗಿ ಪಾಪಣ್ಣ, ನೇತಾಜಿ ಪ್ರಸನ್ನ, ಇಒ ಎಚ್.ಶಶಿಧರ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ಕೆಡಿಪಿ ಸದಸ್ಯೆ ನೇತ್ರಾವತಿ, ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸಣ್ಣ ಸೂರಮ್ಮ, ಕಾರ್ಯದರ್ಶಿ ಈ.ಹನುಮಂತರಾಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ಶ್ರೀನಿವಾಸನ್, ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಕಾರ್ಯದರ್ಶಿ ಈರಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಸುನೀಲ್ ನಾಯ್ಕ, ಬಿಆರ್‌ಸಿ ಬಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.