ಭಟ್ಕಳ:
ಇಲ್ಲಿನ ಜೀವನದಿಯಾದ ಶರಾಬಿ ನದಿಯನ್ನು ಉಳಿಸಿ ರಕ್ಷಿಸುವುದು ಮತ್ತು ಕಲುಷಿತಗೊಳ್ಳಲು ಕಾರಣವಾಗಿರುವ ಗೌಸೀಯಾ ಸ್ಟ್ರೀಟ್‌ನಲ್ಲಿರುವ ಒಳಚರಂಡಿ ಘಟಕ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಶರಾಬಿ ನದಿ ಹೋರಾಟ ಸಮಿತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಶರಾಬಿ ನದಿಗೆ ಕಲುಷಿತ ನೀರು ಶೇಖರಣೆಗೊಂಡು ಜನರಿಗೆ ತೊಂದರೆಯಾಗಿದೆ. ಸುತ್ತಮತ್ತಲಿನ ಬಾವಿಗಳು ಹಾಳಾಗಿದ್ದು, ನೀರು ಉಪಯೋಗಿಸಲು ಅಸಾಧ್ಯವಾಗಿದೆ. ಶರಾಬಿ ನದಿಯನ್ನು ಸ್ವಚ್ಛಗೊಳಿಸುವುದರೊಂದಿಗೆ ನದಿ ಕಲುಷಿತಗೊಳ್ಳಲು ಕಾರಣವಾಗಿರುವ ಒಳಚರಂಡಿ ಸಂಸ್ಕರಣಾ ಘಟಕವನ್ನು ಕೂಡಲೇ ಸ್ಥಳಾಂತರಿಸಬೇಕು. ಈ ಮೂಲಕ ಇಲ್ಲಿನ ಜನರಿಗೆ ನೆಮ್ಮದಿಯ ಬದುಕು ಸಾಗಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ. ಭಟ್ಕಳದ ಜೀವನದಿಯಾಗಿರುವ ಶರಾಬಿ ನದಿಯಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ತೀರದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಶೀಘ್ರದಲ್ಲಿ ಹೊಳೆಯಲ್ಲಿ ಶೇಖರಣೆಗೊಂಡಿರುವ ಹೂಳು ತೆಗೆಸಲು ಮುಂದಾಗಬೇಕು ಮತ್ತು ಈ ನದಿಯ ಗತವೈಭವವನ್ನು ಮರಳಿ ತರುವಲ್ಲಿ ಪ್ರಯತ್ನಿಸಬೇಕು. ನದಿ ಕಲುಷಿತಗೊಂಡು ಈಗಾಗಲೇ ಗೌಸೀಯಾ ಸ್ಟ್ರೀಟ್, ತಕ್ಕೀಯಾ ಸ್ಟ್ರೀಟ್, ಡಾರಂಟ, ಚೌತನಿ, ಪಾರೂಖಿ ಸ್ಟ್ರೀಟ್, ಜಾಮೀಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಮುಂಡಳ್ಳಿ, ಆಸರಕೇರಿ ಮುಂತಾದ ಪ್ರದೇಶಗಳ ಸಾರ್ವಜನಿಕರಲ್ಲಿ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ನದಿ ಕಲುಷಿತಗೊಂಡಿರುವುದರಿಂದ ಡೆಂಘೀ ಮತ್ತಿತರ ರೋಗಗಳು ಹರಡುವ ಭೀತಿ ಉಂಟಾಗಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನದಿಯ ಸ್ವಚ್ಛತೆ ಕಾಪಾಡುವುದು ಮತ್ತು ಅದರಲ್ಲಿ ವ್ಯಾಪಕವಾಗಿ ತುಂಬಿರುವ ಹೂಳು ತೆಗೆಯುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನದಿಯ ಅವಸಾನ ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಕಲುಷಿತಗೊಂಡಿರುವ ನದಿಯನ್ನು ಪುನರ್ಜೀವನಗೊಳಿಸಬೇಕು. ನದಿ ಕಲುಷಿತಗೊಳಿಸುವ ಯಾವುದೇ ಕಾರ್ಯವನ್ನು ಹೋರಾಟ ಸಮಿತಿ ಸಹಿಸುವುದಿಲ್ಲ ಎಂದು ತಿಳಿಸಲಾಗಿದೆ.ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಲಾಯಿತು. ಮೆರವಣಿಗೆಯುಲ್ಲಿ ಮಕ್ಕಳೂ ಇದ್ದರು. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಶಿರಸ್ಥೆದಾರ ರಾಧಿಕಾ ಶಾಸ್ತ್ರಿ ಮನವಿ ಸ್ವೀಕರಿಸಿದರು. ಪುರಸಭೆಯ ಮುಖ್ಯಾಧಿಕಾರಿಗೂ ಮನವಿ ಸಲ್ಲಿಸಲಾಯಿತು. ಈ ವೇಳೆ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ತಂಝೀಂ ಪದಾಧಿಕಾರಿಗಳು, ಹೋರಾಟ ಸಮಿತಿ ಸಂಚಾಲಕ ಮುಸ್ತಫಾ ಆಸ್ಕರಿ, ಅಂಜುಮ್ ನದ್ವಿ, ಮೌಲಾನಾ ಇರ್ಶಾದ್ ನದ್ವಿ, ಖಾಸೀರ್ ಮೊತಿಶ್ಯಾಂ, ಇಮಶ್ಯಾದ್ ಮುಕ್ತೇಸರ್, ಕೆ.ಎಂ. ಅಸ್ಫಾಕ್, ನಝೀರ್ ಕಾಸೀಮಜಿ, ಜೈಲಾನಿ ಶಾಬಂದ್ರಿ, ಇನಾಯತ್ ಗವಾಯಿ, ಹನೀಫ್ ಶಬಾಬ್, ಅಬ್ದುಲ್ ರಹಿಮಾನ್, ಇಕ್ಬಾಲ್ ಸುಹೈಲ್, ಮೊಹ್ಮದ್ ಹುಸೇನ್ ಮೌಲೀಮ್ ಇದ್ದರು.