ಶರಣ ಸಾಹಿತ್ಯದ ಆಳ, ಅಗಲ, ಅದರ ಪ್ರಾಮುಖ್ಯತೆ ನಮಗೆ ಇನ್ನೂ ಅರ್ಥವಾಗಿಲ್ಲ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

, ಶರಣ ಸಾಹಿತ್ಯ ಕುರಿತು ಹೆಮ್ಮೆ ಪಡುವ ನಾವು ಶರಣರು ಹೇಳಿರುವ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಡೆಗೆ ಗಮನ ಹರಿಸುತ್ತಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಶರಣ ಸಾಹಿತ್ಯದ ಆಳ, ಅಗಲ ಹಾಗೂ ಅದರ ಪ್ರಾಮುಖ್ಯತೆ ನಮಗೆ ಇನ್ನೂ ಅರ್ಥವಾಗಿಲ್ಲ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಹಾಗೂ ನಗರ ಘಟಕವು ಭಾನುವಾರ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಕುರಿತು ಹೆಮ್ಮೆ ಪಡುವ ನಾವು ಶರಣರು ಹೇಳಿರುವ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ಶರಣ ಸಾಹಿತ್ಯ ನಮಗೆ ದೊರೆತಿರುವ ಅಮೂಲ್ಯವಾದ ಸಂಪತ್ತು. ಆದರೆ, ಮಕ್ಕಳು ಸಂಪತ್ತಿನ ಬೆಲೆ ಅರಿಯದೇ ಅದರೊಂದಿಗೆ ಆಟವಾಡುವ ಹಾಗೆ, ಶರಣ ಸಾಹಿತ್ಯದ ಜೊತೆಗೆ ಮಕ್ಕಳ ರೀತಿಯಲ್ಲೇ ನಾವೂ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.There is a need to digitize the vachanas

ವಚನ ಸಾಹಿತ್ಯ ಅಥವಾ ಶರಣ ಸಾಹಿತ್ಯ ಯಾವ ಪ್ರಶ್ನೆಗಳನ್ನು ಮಾಡುತ್ತಿವೆ ಎಂಬ ಸ್ಪಷ್ಟವಾದ ಅರಿವು ಸಹ ನಮ್ಮ ಜನರಿಗೆ ಇಲ್ಲ. ಇಂಗ್ಲಿಷಿನ ಪ್ರಭಾವ ಇಲ್ಲದ, ಅನ್ಯ ಮತೀಯರ ದಾಳಿಯೂ ನಡೆಯದ ಹಾಗೂ ತಂತ್ರಜ್ಞಾನದ ಆರಂಭದ ಸ್ಥಿತಿಯ ಕಾಲದಲ್ಲಿ ಲಭ್ಯವಿದ್ದಂತಹ ಜ್ಞಾನ ಹಾಗೂ ಚಿಂತನೆಯನ್ನು ಒಳಗೊಂಡು, ಬದುಕಿಗೆ ಬೇಕಾದ ಸಂಗತಿಗಳನ್ನು ಯಾವ ರೀತಿಯಲ್ಲಿ ಶರಣರು ನಮಗೆ ನೀಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಶರಣರ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ವಚನಗಳು ಪ್ರಕಟಿತ ರೂಪದಲ್ಲಿ ಲಭ್ಯವಿವೆ. ಇನ್ನೂ 5- 6 ಸಾವಿರ ವಚನಗಳು ಸಂಗ್ರಹವಾಗಿದ್ದು, ಪ್ರಕಟವಾಗಿಲ್ಲ. ಇಷ್ಟು ಸಂಪನ್ಮೂಲವಿದ್ದರೂ ನಾವು ಸಭೆಗಳಲ್ಲಿ, ಭಾಷಣಗಳಲ್ಲಿ 10 ರಿಂದ 20 ವಚನಗಳನ್ನು ಮಾತ್ರ ಬಳಸುತ್ತಿಕೊಳ್ಳುತ್ತೇವೆ. ಮಿಕ್ಕ ವಚನಗಳಲ್ಲಿ ಏನಿದೆ ಎನ್ನುವ ಕುತೂಹಲವೂ ನಮಗೆ ಇಲ್ಲ ಎಂದು ಅವರು ಹೇಳಿದರು.

ಹೀಗಾಗಿ, ಶರಣ ಸಾಹಿತ್ಯ ಪರಿಷತ್ತಿನಿಂದ ವಚನಗಳ ಡಿಜಿಟಲೀಕರಣ ಮಾಡಬೇಕಾದ ಅಗತ್ಯವಿದೆ. ಇದರಿಂದ ಎಲ್ಲರಿಗೂ ಸುಲಭವಾಗಿ ವಚನಗಳು ಸಿಗಲಿವೆ. ಅಲ್ಲದೆ, ವಚನ ಸಾಹಿತ್ಯದಲ್ಲಿ ಬರುವ ಶಬ್ದಗಳ ಅರ್ಥವನ್ನು ತಿಳಿಸಲು ಅರ್ಥ ವಿವರಣೆಯುಳ್ಳ ಶಬ್ದಕೋಶವನ್ನು ರಚನೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

5 ಕೃತಿಗಳ ಬಿಡುಗಡೆ

ಇದೇ ವೇಳೆ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಸಂಪಾದಕತ್ವದ ಕೂಡಲ ಸಂಗಮ, ಮಳಲೆಕೆರೆ ಗುರುಮೂರ್ತಿ ಅವರ ಸೋಮೇಶ್ವರ ಶತಕ, ಶ್ರೀ ವಿಜಯಕುಮಾರ ಸ್ವಾಮೀಜಿ ಅವರ ಲಿಂಗಲೀಲಾ ವಿಲಾಸ ಹಾಗೂ ಲಿಂಗಾಂಗ ಸಂಯೋಗ, ಡಾ. ಪುಟ್ಟಪ್ಪ ಮುಡಿಗುಂಡ ಅವರ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ಹಾಗೂ ಮ.ಗು. ಸದಾನಂದಯ್ಯ ಸಂಪಾದಿಸಿರುವ ವಚನ ಶ್ರಾವಣ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಜಲ ಸಾಹಸಿ ಅನನ್ಯ ಪ್ರಸಾದ್, ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಪದಾಧಿಕಾರಿಗಳಾದ ದೇವರಾಜು ಪಿ. ಚಿಕ್ಕಳ್ಳಿ, ಟಿ.ಎಸ್. ಕುಮಾರಸ್ವಾಮಿ, ಬಿ.ಎನ್. ನಂದೀಶ್ವರ, ಎಂ. ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಮೊದಲಾದವರು ಇದ್ದರು.

----

ಬಾಕ್ಸ್...

ವಚನ ಜಾಗೃತಿ ಜಾಥಾ

ಶರಣ ಸಾಹಿತ್ಯ ಸಮ್ಮೇಳನ ಅಂಗವಾಗಿ ಮೆಟ್ರೊಪೋಲ್ ವೃತ್ತದಿಂದ ಕಲಾಮಂದಿರದವರೆಗೆ ವಚನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಈ ಜಾಥಾಗೆ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಚಾಲನೆ ನೀಡಿದರು. ಕಂಸಾಳೆ, ವೀರಗಾಸೆ, ಡೊಳ್ಳು, ನಗಾರಿ, ನಾದಸ್ವರ, ಶರಣದ ಛದ್ಮವೇಷಧಾರಿಗಳು ವಚನ ಫಲಕಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Share this article