ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣನವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು ಶರಣ ಸಾಹಿತ್ಯದ ತಿರುಳನ್ನು ಪ್ರಸ್ತುತ ಸಮಾಜಕ್ಕೆ ಅಳವಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಪ್ರಜ ಗುರುಕುಲದ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯ ಸುನಂದಾದೇವಿ-ಸಂಗಮೇಶ್ವರ ಗೌಡ ದಂಪತಿ ಪ್ರಾಯೋಜಕತ್ವದಲ್ಲಿ ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಶರಣ ಸಂಸ್ಕೃತಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ನುಡಿಯಾಡಿ, ಶರಣ ದತ್ತಿ ದಾನಿಗಳ ದಾನದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಸ್ಮರಣೆ ಅತ್ಯಗತ್ಯವಾಗಿದೆ. ಹನ್ನೆರಡನೇ ಶತಮಾನಕ್ಕೂ ಹಿಂದೆ ಸಾಹಿತ್ಯ ಕ್ಲಿಷ್ಟಕರವಾದ ಸಂಸ್ಕೃತ ಭಾಷೆಯಲ್ಲಿದ್ದು ಅದು ಜನ ಸಾಮಾನ್ಯರಿಗೆ ತಲುಪುತ್ತಲಿರಲಿಲ್ಲ. ವಚನ ಸಾಹಿತ್ಯ ಬಂದ ನಂತರ ಅವು ಸುಲಭ ಕನ್ನಡದಲ್ಲಿ ಇದ್ದು ಎಲ್ಲರಿಗೂ ತಲುಪುವಂತಾಯಿತು. ವಚನ ಸಾಹಿತ್ಯದ ಗಾಯನದ ಜತೆಗೆ ಅದರ ಅರ್ಥ ಮತ್ತು ಅದರ ಒಳಹರವು ಅರ್ಥ ಮಾಡಿಕೊಂಡು ಅದರಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ.ಸಾಹಿತಿ ಜಲಜಾ ಶೇಖರ್ ದತ್ತಿ ಉಪನ್ಯಾಸ ನೀಡುತ್ತಾ 12 ನೇ ಶತಮಾನದ ವಚನ ಸಾಹಿತ್ಯ ಒಂದು ತಪೋವನದಂತೆ ಭಾಸವಾಗುತ್ತದೆ. ಬಸವಾದಿ ಶರಣರ ಕ್ರಾಂತಿಕಾರಿ ಕೆಲಸಗಳು ವಿಶ್ವ ಮಾನ್ಯತೆ ಪಡೆದಿದೆ. ವಚನಕಾರರ ಬದುಕು, ನಡೆ-ನುಡಿ ಸಿದ್ಧಾಂತವೇ ವಚನ ಸಾಹಿತ್ಯ. ವಚನಕಾರರ ಕಾಯಕ ನಿಷ್ಠೆ ಅನುಕರಣೀಯ ಎಂದರು.
12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಶರಣರು ಮತ್ತು ಶರಣೆಯರು ನಡೆಸಿದ ಕ್ರಾಂತಿ ಅನುಭವ ಮಂಟಪದ ಮೂಲಕ ತೆಗೆದುಕೊಂಡ ನಿರ್ಣಯವಾಗಿತ್ತು. ಪ್ರಜಾಪ್ರಭುತ್ವದ ವಿಚಾರಧಾರೆಗಳನ್ನು ಅತ್ಯಂತ ಸರಳವಾಗಿ ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಮಾನವ ಬದುಕಿಗೆ ದಾರಿದೀಪವಾಗಿ ನೀಡಿದವರು ಬಸವಾದಿ ಶರಣರು. ಅನುಭವ ಮಂಟಪ ಭಾರತದ ಮೊದಲ ಸಂಸತ್ತು. ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಸರಕಾರ ತಂದ ಖ್ಯಾತಿ ಅನುಭವ ಮಂಟಪದ ಶರಣರಿಗೆ ಸಲ್ಲುತ್ತದೆ ಎಂದರು.ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ್, ದಾವಣಗೆರೆ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕರಿಬಸಪ್ಪ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಎಚ್.ವಿ.ಶಿವಪ್ಪ ಹಾಗೂ ಸುಪ್ರಜ ಗುರುಕುಲ ಅಧ್ಯಕ್ಷೆ ಡಿ.ಸುಜಲಾ ದೇವಿ ಮಾತನಾಡಿದರು.
ಶರಣ ಮಾಗನೂರು ಬಸಪ್ಪನವರ ಆತ್ಮಚರಿತ್ರೆ ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿ ಎಚ್.ವಿ.ಶಿವಪ್ಪ ಅವರಿಗೆ ಶರಣ ಸಂಸ್ಕೃತಿ ಪ್ರಚಾರಕ ಸನ್ಮಾನ ಮಾಡಿ ಗೌರವಿಸಲಾಯಿತು. ಸಾಹಿತಿ ಜಲಜಾ ಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ಕರಿಬಸಪ್ಪ ಹಾಗೂ ಸುಪ್ರಜ ಗುರುಕುಲ ಅಧ್ಯಕ್ಷೆ ಡಿ.ಸುಜಲಾ ದೇವಿ ಅವರನ್ನು ಸನ್ಮಾನಿಸಲಾಯಿತು.ಶನಿವಾರಸಂತೆ ಹೋಬಳಿ ಕಸಾಪ ಅಧ್ಯಕ್ಷ ಬಿ.ಬಿ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎಂ.ಪಿ.ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಶ.ಗ.ನಯನತಾರಾ, ಕಾಫಿ ಬೆಳೆಗಾರ ಎಸ್.ಎಂ.ಮಹೇಶ್, ಕಸಾಪ ಪ್ರಮುಖ ಪದಾಧಿಕಾರಿಗಳಾದ ಜೆ.ಸಿ.ಶೇಖರ್, ಸಿ.ಎಂ. ಪುಟ್ಟಸ್ವಾಮಿ, ಎ.ಪಿ.ವೀರರಾಜು, ಕೆ.ಪಿ.ದಿನೇಶ್, ಸುಬ್ರಹ್ಮಣ್ಯ, ವೆಂಕಟ್ ನಾಯಕ್, ಪ್ರಕಾಶ್ಚಂದ್ರ, ಕೆ.ಪಿ.ಜಯಕುಮಾರ್, ಎಸ್.ಆರ್.ಶಿವಪ್ಪ,, ಎಂ.ಎನ್ ಮೂರ್ತಿ, ಶಾಂತಮಲ್ಲಪ್ಪ, ಕೇಶವಮೂರ್ತಿ, ರಾಮಕುಮಾರ್, ಭಗವಾನ್ ಗೌಡ, ಶಿವಕುಮಾರ್, ಆಶಾಪುಟ್ಟಸ್ವಾಮಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಕಸಾಪ ಕಾರ್ಯದರ್ಶಿ ಮೋಹನ್ ಸ್ವಾಗತಿಸಿ, ಮುಖ್ಯಶಿಕ್ಷಕಿ ಕೆಂಚಮ್ಮ ನಿರೂಪಿಸಿದರು, ಸುಜಲಾ ವಂದಿಸಿದರು.