ಗದಗ: ಬಸವಾದಿ ಶಿವಶರಣರ ವಚನಗಳನ್ನು ಹೆಚ್ಚು ಹೆಚ್ಚು ಓದಿ ಅರ್ಥೈಸಿಕೊಂಡು ಆ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಪ್ರಗತಿ ಪಥದತ್ತ ಸಾಗುತ್ತೇವೆ. ಮನುಷ್ಯನ ವ್ಯಕ್ತಿತ್ವ ರೂಪಿಸಲು ಬಸವಾದಿ ಶರಣರ ವಚನಗಳು ಬಹಳ ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
12ನೇ ಶತಮಾನದಲ್ಲಿ ನಡೆಸಿದ ಸಮಾಜೋಧಾರ್ಮಿಕ ಚಳವಳಿ ಜಾಗತಿಕ ಇತಿಹಾಸದಲ್ಲಿಯೇ ಮಹತ್ವಪೂರ್ಣವಾದ ಚಳವಳಿಯಾಗಿದೆ. ಹೆಣ್ಣುಮಕ್ಕಳನ್ನು ಗೌರವಿಸಿ,ವಿಶೇಷ ಸ್ಥಾನಮಾನ ಕಲ್ಪಿಸಿ ಧಾರ್ಮಿಕ ಸ್ವಾತಂತ್ರ್ಯ ನೀಡಿದವರು ಬಸವಣ್ಣನವರು ಎಂದರು.
ಕೊಪ್ಪಳದ ಪ್ರಗತಿಪರ ಚಿಂತಕ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಉಪನ್ಯಾಸ ನೀಡಿ, ಭಾರತ ಬಹು ಸಂಸ್ಕೃತಿ, ಬಹುಧರ್ಮಗಳ, ಬಹು ಭಾಷೆಗಳ, ಬಹುಆಹಾರ ಪದ್ಧತಿಗಳ, ಬಹು ವಸ್ತ್ರ ಪದ್ಧತಿಗಳ ದೇಶ. ಈ ಮೇಲು-ಕೀಳು ಭಾವನೆಗಳು ಹೋಗ ಬೇಕಾದರೆ ಪ್ರತಿಯೊಬ್ಬರು ಸತ್ಯಶುದ್ಧ ಕಾಯಕ ಮಾಡಬೇಕು. ಕಾಯಕದಿಂದ ಗಳಿಸಿ ಉಳಿತಾಯವಾದ ಹೆಚ್ಚಿನ ಹಣ ಸಮಾಜಕ್ಕೆ ಉಪಯೋಗಿಸಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಇದನ್ನೇ ದಾಸೋಹ ಎಂದು ಕರೆದರು. ಹೆಚ್ಚುವರಿ ದ್ರವ್ಯ, ಹಣ ವ್ಯಕ್ತಿಯನ್ನು ನಾಶ ಮಾಡುತ್ತದೆ. ನಮ್ಮ ನಮ್ಮ ಧಾರ್ಮಿಕ ವಿಚಾರ ಇಟ್ಟುಕೊಂಡು, ಅನ್ಯಧರ್ಮದ ಜತೆಗೆ ಸೌಹಾರ್ಧಯುತ ಸಂಬಂಧ ಇಟ್ಟುಕೊಳ್ಳಬೇಕು. ಜನ ಪ್ರಗತಿಯ ಕಡೆಗೆ ಸಾಗಬೇಕು ಎಂದು ತಿಳಿಸಿದರು.ಈ ವೇಳೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ನಿಮಿತ್ತ ಹುಬ್ಬಳ್ಳಿಯ ಸನಾ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಂಶಪಾಲ ಮಹೇಶ ಗದಗ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮೃದ್ಧಿ ಶ್ರೀಧರ ಸಿದ್ಲಿಂಗ್ ಅವರನ್ನು ಪೂಜ್ಯರು ಸನ್ಮಾನಿಸಿದರು.
ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಆಯುರ್ವೇದ ವೈದ್ಯ ಡಾ.ಯು.ವಿ. ಪುರದ ಹಾಗೂ ಪರಿವಾರದವರನ್ನು ಸನ್ಮಾನಿಸಲಾಯಿತು.ಸಾಮಾಜಿಕ ಕಾರ್ಯಕರ್ತ ಅಶ್ರಫ್‌ಅಲಿ ಬಸೀರ್ ಅಹ್ಮದ್, ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ.ವಿ.ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.