ಶರಣರ ಸಂದೇಶ ತಲುಪಿಸುವಲ್ಲಿ ಶರಣ ಸಾಹಿತ್ಯ ಪರಿಷತ್ ಸಕ್ರಿಯ: ಮಾರುತಿ ಶಿಡ್ಲಾಪುರ

KannadaprabhaNewsNetwork | Published : Mar 14, 2024 2:04 AM

ಸಾರಾಂಶ

ಹಿರೇಕೆರೂರು ಪಟ್ಟಣದ ಬಸವೇಶ್ವರ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರೇಕೇರೂರು ಹಾಗೂ ರಟ್ಟಿಹಳ್ಳಿ ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆ ನಡೆಯಿತು.

ಹಿರೇಕೆರೂರು: ಶರಣದ ಸಂದೇಶಗಳು ಸಾತ್ವಿಕ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸರಳ ನಿರೂಪಣೆ ಹೊಂದಿದ್ದು, ಅವನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ ಹಾವೇರಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳು ಪುನರಚನೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ತಿಳಿಸಿದರು.

ಪಟ್ಟಣದ ಬಸವೇಶ್ವರ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರೇಕೇರೂರು ಹಾಗೂ ರಟ್ಟಿಹಳ್ಳಿ ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ವಚನ ಪ್ರಚಾರ ಪ್ರಸಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಮುಖ್ಯವಾಗಿ ಯುವಕರು ಹಾಗೂ ಮಕ್ಕಳಿಗೆ ವಚನ ಸಾಹಿತ್ಯ ಹಾಗೂ ಶರಣರ ಸಂದೇಶಗಳು ತಲುಪುವ ಅಗತ್ಯವಿದೆ. ಅದಕ್ಕಾಗಿ ಪದಾಧಿಕಾರಿಗಳು ಹಾಗೂ ಶರಣ ಚಿಂತಕರು ಇನ್ನಷ್ಟು ಸಕ್ರಿಯಗೊಳ್ಳಬೇಕು ಎಂದು ಕರೆ ನೀಡಿದರು.

ಶಸಾಪ ತಾಲೂಕು ಘಟಕದ ಅಧ್ಯಕ್ಷ ಜಿ.ಆರ್. ಕೆಂಚಕ್ಕಳವರ ಮಾತನಾಡಿ, ಮನೆಯಲ್ಲಿ ಮಹಾಮನೆ, ಶಾಲೆ ಕಾಲೇಜುಗಳಲ್ಲಿ ಶರಣ ಚಿಂತನೆ, ತಾಲೂಕು ಸಮ್ಮೇಳನವೂ ಸೇರಿದಂತೆ ನಿತ್ಯ ನಿರಂತರ ಶರಣರ ತತ್ವ ಪ್ರಸಾರಕ್ಕೆ ಹಿರೇಕೇರೂರು ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಸಂಘಟಿತವಾಗಿ ಕೆಲಸ ಮಾಡುತ್ತಿದೆ. ಈಗ ದತ್ತಿಗಳನ್ನು ನೀಡುವುದು, ಸದಸ್ಯತ್ವ ಅಭಿಯಾನ ನಡೆಸುವ ಮೂಲಕ ಪರಿಷತ್ತಿನ ಸದಸ್ಯರ ಬಲ ಹೆಚ್ಚಿಸಬೇಕಾಗಿದೆ. ಶರಣ ಸಾಹಿತ್ಯ ಪರಿಷತ್ತಿನ ಮಹಾಮನೆ ಪತ್ರಿಕೆ ಹೆಚ್ಚು ಮನೆಗಳಿಗೆ ತಲುಪಿಸುವ ಗುರಿ ನಮ್ಮದಾಗಿದೆ ಎಂದರು.

ಶಸಾಪ ಜಿಲ್ಲಾ ಘಟಕದ ಸದಸ್ಯ ಗುರುಶಾಂತ ಯತ್ತಿನಹಳ್ಳಿ ಮಾತನಾಡಿ, ಒಂದು ದಶಕದಾಚೆ ಹಿರೇಕೇರೂರಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ಹಿರೇಕೆರೂರಿನಲ್ಲಿ ಸಾಂಸ್ಕೃತಿಕ ಧಾರ್ಮಿಕ ಒಳ್ಳೆಯ ವಾತಾವರಣವಿದೆ. ಶರಣರ ವಿಚಾರಧಾರೆಗಳನ್ನು ಮನೆ ಮನೆಗಳಿಗೆ ತಲುಪಿಸುವುದು ಈಗ ಅತ್ಯಂತ ಅಗತ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ವಚನಗಳು ಅತ್ಯಂತ ಪ್ರಭಾವ ಹಾಗೂ ಪರಿಣಾಮ ಬೀರುವಂತಹವುಗಳಾಗಿವೆ. ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ಶರಣರ ಚಿಂತನೆಗಳನ್ನು ಬಿತ್ತಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.

ನಿವೃತ್ತ ಉಪನ್ಯಾಸಕ ಎಚ್.ಎಸ್. ಹಲಗೇರಿ, ಶಸಾಪ ನಗರ ಘಟಕದ ಅಧ್ಯಕ್ಷ ಆರ್.ಬಿ. ಹಂಜಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಬಸಮ್ಮ ಅಬಲೂರು, ಎಂ.ಜಿ. ಈಶ್ವರಗೌಡ್ರ, ಜಯಕುಮಾರ ಹುಲ್ಲಿನಕೊಪ್ಪ, ಐ.ಬಿ. ಕಾಟೇನಹಳ್ಳಿ, ವೀರಭದ್ರಪ್ಪ ಚಿಟ್ಟೂರ, ಪೂರ್ಣಿಮಾ ಕಾರ್ಗಿ, ಕವಿತಾ ಕಲ್ಯಾಣಿ, ರೂಪಾ ನ್ಯಾಮತಿ, ಆಶಾ ಕಲ್ಯಾಣಿ, ಶಶಿಕಲಾ ಬೇತೂರು, ಶಶಿಕಲಾ ಹಾದ್ರಿಹಳ್ಳಿ, ಕೆ.ಎಚ್. ಕಾಟೇನಹಳ್ಳಿ, ಪ್ರಕಾಶ ಆರೀಕಟ್ಟಿ, ರಟ್ಟೀಹಳ್ಳಿ ಘಟಕದ ಅಧ್ಯಕ್ಷ ಎಸ್.ಎಂ. ಮಠದ, ಸಿ.ಎಸ್. ಚಕ್ರಸಾಲಿ, ಎಸ್.ಎಸ್. ಪ್ಯಾಟಿಗೌಡ್ರ, ರಾಜು ಹರವಿಶೆಟ್ಟರ, ಚಾಮರಾಜ ಕಮ್ಮಾರ ಮಾತನಾಡಿದರು.

Share this article