ಶರಣ ಸಾಹಿತ್ಯ ಬದುಕಿಗೆ ದಾರಿದೀಪ: ಶಿವಕುಮಾರ ಗೌಡ ಪಾಟೀಲ

KannadaprabhaNewsNetwork |  
Published : Aug 02, 2026, 02:00 AM IST
ಗದಗ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ ಶನಿವಾರ ಉದ್ಘಾಟನೆಗೊಂಡಿತು. | Kannada Prabha

ಸಾರಾಂಶ

ಗದಗ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ಆಯೋಜಿಸಿದ್ದ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಗ್ರಂಥಗಳ ಲೋಕಾರ್ಪಣೆ ಮಾಡಲಾಯಿತು.

ಗದಗ: ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯವು ಮನುಷ್ಯನಿಗೆ ಅರಿವು, ವಿದ್ಯೆ ಮತ್ತು ಸಂಸ್ಕಾರ ನೀಡುವ ಮೂಲಕ ಸನ್ಮಾರ್ಗದಲ್ಲಿ ಬದುಕುವ ಶಕ್ತಿ ನೀಡುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ಆಯೋಜಿಸಿದ್ದ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಗ್ರಂಥಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೋಶ ಓದಬೇಕು, ದೇಶ ಸುತ್ತಬೇಕು ಎಂಬ ಗಾದೆಯಂತೆ, ಜಗತ್ತಿನ ಮತ್ತು ಬದುಕಿನ ಅರಿವನ್ನು ಪಡೆಯಲು ಸಾಹಿತ್ಯದ ಅಧ್ಯಯನ ಅಗತ್ಯ. ಶರಣ ಸಾಹಿತ್ಯವು ಕಣ್ಣಿಲ್ಲದವರಿಗೆ ಕಣ್ಣು, ವಿದ್ಯೆಯಿಲ್ಲದವರಿಗೆ ಅರಿವು ಹಾಗೂ ಬದುಕಿಗೆ ಸ್ಪಷ್ಟ ದಾರಿಯನ್ನು ತೋರಿಸುವ ದಿವ್ಯಶಕ್ತಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಜಾತಿ, ಮತಗಳ ಭೇದವಿಲ್ಲದೆ ಮನುಷ್ಯ ಜಾತಿ ಒಂದೇ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಲು ಶರಣ ಸಾಹಿತ್ಯದ ಬೋಧನೆ ಅತ್ಯಗತ್ಯವಾಗಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಿಂಗು ಸೊಲಗಿ ಮಾತನಾಡಿ, ಬಸವಣ್ಣನವರ ವಚನಗಳು ಮತ್ತು ಶರಣರ ತತ್ವಗಳು ನಮಗೆ ಸದಾ ದಾರಿದೀಪವಾಗಿವೆ. ವಚನಗಳ ಆದರ್ಶಗಳನ್ನು ಮತ್ತು ಶರಣ ಸಂಸ್ಕೃತಿಯನ್ನು ಮಕ್ಕಳಿಗೆ ಅವರ ಬಾಲ್ಯದಲ್ಲೇ ತಲುಪಿಸುವ ಕೆಲಸವಾಗಬೇಕು. ಶರಣರ ಸಂಸ್ಕೃತಿಯು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೇ, ಸಮಸ್ತ ಮಾನವಕುಲವನ್ನು ಒಳಗೊಂಡ ಸಾರ್ವಭೌಮ ಸಂಸ್ಕೃತಿಯಾಗಿದೆ. ಇವ ನಮ್ಮವ ಎಂಬ ಭಾವನೆಯನ್ನು ಮಕ್ಕಳಲ್ಲಿ ಬಿತ್ತಿದಾಗ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಮೇವುಂಡಿ ಮಲ್ಲಾರಿ ಅವರ ಕಥೆಗಳನ್ನು ಉದಾಹರಿಸುತ್ತಾ, ಮಕ್ಕಳಲ್ಲಿ ನೈಸರ್ಗಿಕ ಕುತೂಹಲ, ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಮೇವುಂಡಿ ಮಲ್ಲಾರಿ ಅವರ ಕಥೆಗಳನ್ನು ಉದಾಹರಿಸುತ್ತಾ, ಮಕ್ಕಳಲ್ಲಿ ನೈಸರ್ಗಿಕ ಕುತೂಹಲ, ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ. ಇಂದಿನ ಮಕ್ಕಳು ಪ್ರಕೃತಿಯಿಂದ ದೂರವಾಗುತ್ತಿದ್ದು, ಅವರಿಗೆ ಜಾನಪದ ಆಟಗಳು, ಕಥೆಗಳು ಮತ್ತು ಕಾಯಕ ಹಾಗೂ ದಾಸೋಹ ಸಂಸ್ಕೃತಿಯ ಪರಿಚಯವನ್ನು ಶಿಕ್ಷಣದ ಭಾಗವಾಗಿ ನೀಡಬೇಕು. ಕೇವಲ ಅಂಕ ಗಳಿಕೆಯ ಪರೀಕ್ಷೆಗಳಿಗೆ ಸೀಮಿತವಾಗದೆ, ಜೀವನದ ಪರೀಕ್ಷೆ ಎದುರಿಸುವ ಜೀವನ ಕೌಶಲಗಳನ್ನು ಮಕ್ಕಳಿಗೆ ಕಲಿಸುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದಂತೆ. ಅವರ ಹೃದಯದಲ್ಲಿ ನಾವು ಬಿತ್ತುವ ಸದ್ವಿಚಾರಗಳು ಅವರ ಭವಿಷ್ಯ ರೂಪಿಸುತ್ತವೆ. ಆದ್ದರಿಂದ ಪೋಷಕರು ತಮ್ಮ ಒತ್ತಡವನ್ನು ಮಕ್ಕಳ ಮೇಲೆ ಹೇರದೇ, ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಹಾಗೂ ಸಮಯದ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳು ತಮಗೆ ಸಿಕ್ಕಿರುವ ಈ ಬಾಲ್ಯ ಮತ್ತು ಅಧ್ಯಯನದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ, ಸುಧಾ ಹುಚ್ಚಣ್ಣವರ, ಶಿವಪ್ರಕಾಶ ಮಹಾಜನಶೆಟ್ಟರ, ಸುಲೋಚನಾ ಐಹೊಳೆ, ಡಿ.ಎಸ್. ತಳವಾರ, ಎಂ.ಕೆ. ಲಮಾಣಿ, ನಂದಾ ಕಪ್ಪತ್ತಣವರ, ಬೂದಪ್ಪ ಅಂಗಡಿ, ಬಸವರಾಜ ಕೊಟಗಿ, ಪ್ರಕಾಶ ಅಸುಂಡಿ ಉಪಸ್ಥಿತರಿದ್ದರು. ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಧೂಳಪ್ಪನವರ, ಎಸ್.ಎಂ. ಮರಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಝೀ ವಾಹಿನಿಯ ಸ್ಪರ್ಧಿ ಗದಗ ಜಿಲ್ಲೆಯ ಪ್ರೀತಮ್ ಕಬ್ಬೇರಹಳ್ಳಿ ಅವರಿಗೆ ಬಾಲ ಶರಣಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚೇತನ ಸೊಲಗಿ ತಮ್ಮ ಧ್ವನಿಯ ಮೂಲಕ ನೆರೆದಿದ್ದ ವಿದ್ಯಾರ್ಥಿಗಳ ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆ: ಡಾ. ನಿಂಗು ಸೊಲಗಿ
ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಸುವಂತೆ ಒತ್ತಾಯ