ಸಮಾಜಕ್ಕೆ ಶರಣರ ವಚನಗಳು ಮಹಾಮಂತ್ರ

KannadaprabhaNewsNetwork | Published : Feb 10, 2025 1:46 AM

ಸಾರಾಂಶ

ನಮ್ಮ ಮನೆಯ ಮಕ್ಕಳಿಗೆ ವಚನಗಳ ಪ್ರಾಮುಖ್ಯತೆ ತಿಳಿಸಿಕೊಡಬೇಕು ಹಾಗೂ ಕಲಿಸಬೇಕು

ಶಿರಹಟ್ಟಿ: ವೈಚಾರಿಕ ನೆಲೆಗಟ್ಟಿನ ಮೇಲೆ ಸಾಮಾಜಿಕ,ಆಧ್ಯಾತ್ಮಿಕ, ಸಾಂಸ್ಕೃತಿಕ ಜೀವನ ಮೌಲ್ಯಗಳ ಜನಪರ, ಜೀವಪರ ಕಾಳಜಿಯಿಂದ ಬಸವಾದಿ ಶರಣರು ಅಂದು ಮಾಡಿದ ಕ್ರಾಂತಿಯು ಪ್ರಸ್ತುತ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ.ಶರಣರ ವಚನಗಳಿಂದ ಯುವಜನಾಂಗದ ಬದುಕು ರೂಪಿಸಿಕೊಳ್ಳಬಹುದಾಗಿದೆ. ತಾಂತ್ರಿಕ ಯುಗದಲ್ಲಿ ಸಮಾಜಕ್ಕೆ ಶರಣರ ವಚನಗಳು ಮಹಾ ಮಂತ್ರಗಳಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಎಂದು ಹೇಳಿದರು.

ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಪಟ್ಟಣದ ಶಿಕ್ಷಕರ ಸೊಸೈಟಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶರಣರ ವಚನಗಳು ಎಲ್ಲರಿಗೂ ದಾರಿ ದೀಪವಾಗಿವೆ. ೯೦೦ ವರ್ಷಗಳ ಹಿಂದೆಯೇ ಶರಣರು ಅದ್ಭುತ,ಅರ್ಥಗರ್ಭಿತ ವಚನಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.

ನಮ್ಮ ಮನೆಯ ಮಕ್ಕಳಿಗೆ ವಚನಗಳ ಪ್ರಾಮುಖ್ಯತೆ ತಿಳಿಸಿಕೊಡಬೇಕು ಹಾಗೂ ಕಲಿಸಬೇಕು. ಮನೆ ಮನೆಗೂ ವಚನ ತಲುಪಿಸಬೇಕು. ೧೨ನೇ ಶತಮಾನದ ಶರಣರ ವಚನಗಳು ನಮಗೆ ದಾರಿ ದೀಪವಾಗಿದ್ದು, ಒಂದೊಂದು ವಚನದಲ್ಲಿ ನಿತ್ಯ ಜೀವನದ ಆಗುಹೋಗು ಕಾಣುತ್ತೇವೆ. ಅವರನ್ನು ಸ್ಮರಿಸುತ್ತ ಅವರ ವಚನಗಳನ್ನು ನಾವು ಓದಬೇಕು ಎಂದರು.

ವಚನಗಳಲ್ಲಿ ಆಗಾಧ ಶಕ್ತಿ ಅಡಗಿದ್ದು, ಸಮಾಜ ಸುಧಾರಣೆಗೆ ಎಲ್ಲ ಕ್ರಾಂತಿಗಳಿಗಿಂತ ವಚನ ಕ್ರಾಂತಿಯೇ ಶ್ರೇಷ್ಟ. ವಚನಗಳು ಸಮಾನತೆ ಸಾರಿದ್ದು, ಮೇಲು ಕೀಳು ಎಂಬ ಭಾವನೆ ಕಿತ್ತೊಗೆದು ಸರ್ವರಿಗೂ ಸಮಬಾಳು ಕೊಟ್ಟಿವೆ. ವಚನ ಸಾಹಿತ್ಯ ಪ್ರತಿಯೊಬ್ಬರೂ ಓದುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ಶರಣರ ವಚನಗಳು ಜನಸಾಮಾನ್ಯರಿಗೆ ಬದುಕನ್ನು ಹೇಗೆ ಸಾಗಿಸಬೇಕು ಎಂಬ ಪಾಠ ಕಲಿಸುತ್ತವೆ. ಶರಣರ ಬದುಕು ಹಸನಾಗಿತ್ತು. ಅವರು ನೀಡಿದ ಸಂದೇಶ ವಚನ ರೂಪದಲ್ಲಿ ಮೂಡಿಬಂದಿವೆ. ವಚನ ಎಂದರೆ ಭಾಷೆ, ಪ್ರಮಾಣ, ಪ್ರತಿಜ್ಞೆ ಎಂದು ಅರ್ಥ. ಅವರು ನುಡಿದ ವಚನ ಇಂದಿಗೂ ಪ್ರಸ್ತುತ. ವಚನಗಳು ಮನುಷ್ಯ ಜೀವನದ ಬದುಕಿನ ಬುತ್ತಿ ಆಗಿದ್ದವು. ಇಂದು ಮಕ್ಕಳಾದಿಯಾಗಿ ವಚನ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಇಂದು ವಚನಗಳು ಮಕ್ಕಳ ಹಂತದಲ್ಲಿ ತಲುಪಬೇಕಾಗಿದೆ.ನುಡಿದಂತೆ ನಡೆಯುವುದೇ ವಚನ. ಅಂದು ಬಸವಣ್ಣ, ೧೨ನೇ ಶತಮಾನದ ಶರಣರು ರಚಿಸಿದ ವಚನಗಳು ಸರ್ವಕಾಲಿಕ ಸತ್ಯ ಸಂಗತಿಗಳು. ಶರಣರ ಸಮೃದ್ಧ ಸಾಹಿತ್ಯ ಜೀವನದ ಸಾರ ತಿಳಿಸುವಲ್ಲಿ ಸಫಲವಾಗಿವೆ. ಜತೆಗೆ ನಮ್ಮ ಸಂವಿಧಾನದ ಮೂಲ ಆಶಯ ಅಂದಿನಿಂದಲೇ ಪ್ರತಿಪಾದಿಸಿವೆ ಎಂದರು.

ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಶರಣರ ವಚನ ಅಧ್ಯಯನ ಮಾಡುವುದರಿಂದ ಸಂಸಾರದ ತೊಡಕುಗಳು ದೂರವಾಗುತ್ತವೆ. ಸುಂದರ ಜೀವನ ಕಟ್ಟಿಕೊಳ್ಳಲು ಪಂಚೇಂದ್ರಿಯ ನಿಗ್ರಹಿಸಲು ಶರಣರ ವಚನಗಳು ದಾರಿದೀಪಗಳಾಗಿವೆ.

ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಎಚ್.ಎಂ. ದೇವಗಿರಿ, ನಂದಾ ಕಪ್ಪತ್ತನವರ, ಎಂ.ಎ. ಮಕಾನದಾರ, ನಂದಾ ಪ್ರಕಾಶ ಪಲ್ಲೇದ ಸೇರಿದಂತೆ ಅನೇಕರು ಇದ್ದರು.

Share this article