ಇಂದಿನಿಂದ ಮೇಲುಕೋಟೆಯಲ್ಲಿ ಶರನ್ನವರಾತ್ರಿ ಮಹೋತ್ಸವ ಆರಂಭ

KannadaprabhaNewsNetwork |  
Published : Sep 22, 2025, 01:00 AM IST
21ಕೆಎಂಎನ್ ಡಿ25,26 | Kannada Prabha

ಸಾರಾಂಶ

ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಸೋಮವಾರ ಬಂಗಾರದ ಶೇಷವಾಹನೋತ್ಸವ ವೈಭವದಿಂದ ನಡೆದು ನವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಗ್ಗೆ 6.30ಕ್ಕೆ ನಿತ್ಯಪೂಜಾ ಕೈಂಕರ್ಯಗಳನ್ನು ಆರಂಭಿಸಿ 11 ಗಂಟೆಗೆ ಕಲ್ಯಾಣನಾಯಕಿ ಅಮ್ಮನವರಿಗೆ ಪುಷ್ಪಾಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ.22 ರಿಂದ ಅ.1ರವರೆಗೆ ನಡೆಯಲಿದೆ. ಅ.2ರಂದು ವಿಜಯದಶಮಿ ಅದ್ಧೂರಿಯಾಗಿ ನಡೆಯಲಿದೆ.

ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಸೋಮವಾರ ಬಂಗಾರದ ಶೇಷವಾಹನೋತ್ಸವ ವೈಭವದಿಂದ ನಡೆದು ನವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಗ್ಗೆ 6.30ಕ್ಕೆ ನಿತ್ಯಪೂಜಾ ಕೈಂಕರ್ಯಗಳನ್ನು ಆರಂಭಿಸಿ 11 ಗಂಟೆಗೆ ಕಲ್ಯಾಣನಾಯಕಿ ಅಮ್ಮನವರಿಗೆ ಪುಷ್ಪಾಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನಡೆಯಲಿದೆ. ನಂತರ ವಿಶೇಷ ಪುಷ್ಪಹಾರದೊಂದಿಗೆ ಅಲಂಕೃತ ಕಲ್ಯಾಣಿತಾಯಿಗೆ ಬಂಗಾರದ ಶೇಷವಾಹನೋತ್ಸವ ದಿವ್ಯಪ್ರಬಂಧ ಪಾರಾಯಣ ಹಾಗೂ ಮಂಗಳ ವಾದ್ಯಗಳೊಂದಿಗೆ ನಾಲ್ಕೂ ಉತ್ಸವ ಬೀದಿಗಳಲ್ಲಿ ವೈಭವದಿಂದ ನಡೆಯಲಿದೆ.

ಮೈಸೂರು ಅರಸರ ಕುಲದೈವವೂ ಆದ ಚೆಲುವನಾರಾಯಣಸ್ವಾಮಿಗೆ ಅ.2ರ ವಿಜಯದಶಮಿಯಂದು ಮಹಾರಾಜರ ಅಲಂಕಾರ ನೆರವೇರಿಸಲಾಗುತ್ತದೆ. ಸಂಜೆ ಜಂಬೂಸವಾರಿ ಬನ್ನಿಪೂಜೆ ನಡೆಯಲಿದೆ. ಇಲ್ಲಿನ ನವರಾತ್ರಿ - ವಿಜಯದಶಮಿ ಮಹೋತ್ಸವ ಜನಾಕರ್ಷಣೆಯ ಐತಿಹಾಸಿಕ ಉತ್ಸವವಾಗಿದೆ. ಪ್ರೋತ್ಸಾಹದ ಕೊರತೆಯಿಂದ ಸಾಂಕೇತಿಕವಾಗಿ ನಡೆಯುತ್ತಾ ಬಂದಿದೆ. ಇಲ್ಲಿಯೂ ನವರಾತ್ರಿ ಮಹೋತ್ಸವ ಆಚರಣೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಬೇಕು ಎಂಬುದು ಭಕ್ತರ ಆಶಯವಾಗಿದೆ.

ನವರಾತ್ರಿ ಪೂರ್ವಸಿದ್ಧತೆಯ ಬಗ್ಗೆ ಮಾಹಿತಿ ನೀಡಿದ ದೇಗುಲದ ಇಒ ಶೀಲಾ ಅವರು, ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ಸರಳ ದೀಪಾಲಂಕಾರ ಮಹಾಲಕ್ಷ್ಮಿ ಕಲ್ಯಾಣನಾಯಕಿಗೆ ಗೆ 9 ದಿನಗಳಕಾಲ ಪ್ರತಿದಿನ ವಿಶೇಷ ತೋಮಾಲೆ ಮಂಗಳವಾದ್ಯ ವ್ಯವಸ್ಥೆ ಮಾಡಲಾಗಿದೆ.ವಿಜಯದಶಮಿಯನ್ನು ಅಚ್ಚುಕಟ್ಟಾಗಿ ನಡೆಸಲು ಸಹ ಸಿದ್ದತೆ ಮಾಡಿದ್ದು ಧಾರ್ಮಿಕ ಕೈಂಕರ್ಯಗಳನ್ನು ಸಕಾಲದಲ್ಲಿ ಅಚ್ಚುಕಟ್ಟಾಗಿ ನಡೆಸಲು ಪಾರುಪತ್ತೇಗಾರರಿಗೆ ಸೂಚಿಸಲಾಗಿದೆ. ನವರಾತ್ರಿ - ವಿಜಯದಶಮಿಯಲ್ಲಿ ಸೇವೆಮಾಡಲು ಭಕ್ತರಿಗೆ ಅವಕಾಶವಿದೆ ಎಂದಿದ್ದಾರೆ.

ಮಹಾರಾಜರ ಅಲಂಕಾರ:

ವಿಜಯದಶಮಿಯಂದು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೆ ಮಹಾರಾಜರ ಅಲಂಕಾರ ಇರಲಿದೆ. ಸಂಜೆ ಸ್ವಾಮಿಗೆ ಅಶ್ವವಾಹನದ ಜಂಬೂಸವಾರಿ ಬನ್ನಿಪೂಜೆ, ನಂತರ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಅಂಗಡಿಬೀದಿ ವೃತ್ತದದಿಂದ ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವ ಮತ್ತು ಕಲ್ಯಾಣನಾಯಕಿ ಅಮ್ಮನವರ ದೊಡ್ಡ ಶೇಷವಾಹನದ ಎದರುಸೇವೆ ಉತ್ಸವ ವೈಭವದಿಂದ ನಡೆಯಲಿದೆ. ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೆ.22 ರಿಂದ ಆರಂಭವಾಗುವ ನವರಾತ್ರಿ ಅ.1 ರವರೆಗೆ ನಡೆಯಲಿದೆ. ಮಹಾಲಕ್ಷ್ಮಿ ಕಲ್ಯಾಣನಾಯಿಕಿ ಅಮ್ಮನವರಿಗೆ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಬಂಗಾರದ ಶೇಷವಾಹನೋತ್ಸವ, ಅ.1 ರಂದು ಮಹಾನವಮಿ ಉತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ