ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ಭಾನುವಾರದಿಂದ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ.
ಮಂಜುನಾಥ ಹೆಗಡೆ ಮಣಿಗಾರ ದಂಪತಿಗಳು ಯಜಮಾನತ್ವ ವಹಿಸಿಕೊಂಡರು. ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ, ಶ್ರೀಸೂಕ್ತ, ಪುರುಷಸೂಕ್ತ, ದುರ್ಗಾಸೂಕ್ತ, ದೇವೀಸೂಕ್ತ ಪಠಣ ಹಾಗೂ ನವಗ್ರಹ, ಬ್ರಹ್ಮಾಸ್ತ್ರ ಜಪಗಳು ನವರಾತ್ರಿಯುದ್ದಕ್ಕೂ ನಡೆಯಲಿವೆ.
ಪ್ರತಿದಿನ ಮಧ್ಯಾಹ್ನ ದುರ್ಗಾಪೂಜೆ, ಮಂಗಳಾರತಿ ಹಾಗೂ ದೇವೀಭಾಗವತ ಪುರಾಣ ಪ್ರವಚನ ಜರುಗಲಿದ್ದು, ರಾತ್ರಿ ದುರ್ಗಾಪೂಜೆ, ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ಕೂಡ ಇರಲಿದೆ. ಉತ್ಸವದ ಅವಧಿಯಲ್ಲಿ ಉಭಯ ಶ್ರೀಗಳು ಬ್ರಾಹ್ಮೀ ಮುಹೂರ್ತ ಹಾಗೂ ಪ್ರದೋಷ ಕಾಲದಲ್ಲಿ ಶ್ರೀಚಕ್ರಾರ್ಚನೆ ನೆರವೇರಿಸಲಿದ್ದಾರೆ.ಶರನ್ನವರಾತ್ರಿ ಅಂಗವಾಗಿ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ 20ರ ವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 8.30ರ ವರೆಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ.ಶಿರಸಿ ಮಾರಿಕಾಂಬಾ ದೇಗುಲದಲ್ಲಿ ನವರಾತ್ರಿ ಉತ್ಸವ
ಶಿರಸಿ: ನಗರದ ಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 11ರಿಂದ 20ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಗಳು ಜರುಗಲಿವೆ ಎಂದು ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರವಿ ಬೆಳ್ಳೆಮನೆ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಗಳ ಜತೆಗೆ ಸಾಮಾಜಿಕ, ಶೈಕ್ಷಣಿಕ, ಕಾರ್ಯಕ್ರಮಗಳಲ್ಲಿ ಮಕ್ಕಳು ಮತ್ತು ಯುವಕರು ಹಾಗೂ ಕಲಾವಿದರು ಭಾಗವಹಿಸುವ ಮೂಲಕ ತಮ್ಮ ನಿಜವಾದ ಪ್ರತಿಭೆಯನ್ನು ಹೊರಹಾಕಬಹುದು ಎಂದರು.ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುವ ಭಾರತೀಯ ಸಂಸ್ಕೃತಿಯ ಸಂಕೇತವಾದ ದಸರಾ ಹಬ್ಬಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದುಷ್ಟ ಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯು ಜಯವನ್ನು ಸಾರುವ ಹಬ್ಬವಾಗಿದೆ. ಧರ್ಮ, ಸತ್ಯ, ನ್ಯಾಯ ಮತ್ತು ಒಳಿತಿನ ಸಂಕೇತವಾಗಿದೆ ಎಂದರು.ನವರಾತ್ರಿ ಮತ್ತು ದಸರಾ ಉತ್ಸವಗಳು ನಮ್ಮ ಧಾರ್ಮಿಕ ಪರಂಪರೆ ಭಕ್ತಿ, ಕಲೆ ಮತ್ತು ಸಾಂಸ್ಕೃತಿಯನ್ನು ಪರಿಚಯಿಸುವ ಮಹತ್ವದ ಸಂದರ್ಭ ಇದಾಗಿದೆ. ದೀಪ ಜ್ಞಾನದ ಸಂಕೇತ. ಬೆಳಕಿನ ಸಂಕೇತ ಹಾಗೂ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ 9 ದಿನ ನಡೆಯುವ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ಕಾರವಾರ ಜಿಲ್ಲಾ ನ್ಯಾಯಾಧೀಶರಾದ ಪರಮೇಶ್ವರ್ ಪ್ರಸನ್ನ ಅವರು ಚಾಲನೆ ನೀಡಿ ಉತ್ಸವಕ್ಕೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಸದಸ್ಯರಾದ ವಿನಾಯಕ ಸೇಟ್, ಕೇಶವ ಹೆಗಡೆ, ಅರ್ಚನಾ ರಾಘವೇಂದ್ರ ಹೊನ್ನಾವರ್, ಬಾಬುದಾರರಾದ ಜಗದೀಶ್ ಗೌಡ, ಬಸವರಾಜ್ ಚಕ್ರಸಾಲಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.