ದುಡಿವವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಚನ ರಚಿಸಿದ ಶರಣರು: ನಾಗರಾಜ

KannadaprabhaNewsNetwork | Published : Feb 11, 2025 12:47 AM

ಸಾರಾಂಶ

ದುಡಿವ ಜನರ ದೃಷ್ಟಿಯಲ್ಲಿಟ್ಟುಕೊಂಡು ಸಮ ಸಮಾಜದ ಆಶಯ ಹಾಗೂ ವೈಚಾರಿಕೆ ನೆಲೆಯಲ್ಲಿಯೇ ಬಸವಾದಿ ಶರಣರು ವಚನಗಳನ್ನು ರಚಿಸಿದ್ದಾರೆ

ಬಳ್ಳಾರಿ: ದುಡಿವ ಜನರ ದೃಷ್ಟಿಯಲ್ಲಿಟ್ಟುಕೊಂಡು ಸಮ ಸಮಾಜದ ಆಶಯ ಹಾಗೂ ವೈಚಾರಿಕೆ ನೆಲೆಯಲ್ಲಿಯೇ ಬಸವಾದಿ ಶರಣರು ವಚನಗಳನ್ನು ರಚಿಸಿದ್ದಾರೆ ಎಂದು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮವನ್ನು ಕಾಯಕ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಮ ಸಮಾಜದ ನಿರ್ಮಾಣದ ಆಶಯ ಹೊಂದಿದ್ದ 12ನೇ ಶತಮಾನದ ಶರಣರು, ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರಲು ಸಾಕಷ್ಟು ಶ್ರಮಿಸಿದರು. ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಬಸವಾದಿ ಶರಣರು ಮುಂದಾಳತ್ವ ವಹಿಸಿ ಜನರಲ್ಲಿ ಅರಿವಿನ ದೀವಿಗೆ ಹಚ್ಚಿದರು ಎಂದರು.

ಯಾವುದೇ ಕಾಯಕ ಮೇಲಲ್ಲ. ಕೀಳಲ್ಲ ಎಂಬ ಭಾವನೆ ಬಸವಾದಿ ಶರಣರಲ್ಲಿತ್ತು. ಕಾಯಕಕ್ಕೆ ಮೊದಲ ಆದ್ಯತೆ ನೀಡಿದರು. ಪ್ರತಿಯೊಬ್ಬರು ದುಡಿದು ತಿನ್ನಬೇಕು. ದುಡಿಯದವಗೆ ತಿನ್ನುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು. ಶರಣರ ನಿಲುವುಗಳಿಗೆ ಅದೆಷ್ಟೋ ವಿರೋಧಗಳು ಎದುರಾದರೂ ತಮ್ಮ ಸೈದ್ಧಾಂತಿಕ ನಿಲುವಿನಿಂದ ಹೊರ ಬರಲಿಲ್ಲ. ದುಡಿವವರೇ ದೇವರು ಎಂಬ ಮಾತನ್ನು ಪದೇಪದೇ ಹೇಳುತ್ತಲೇ ಬಂದರು.

ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣರಿದ್ದರು. ಅವರಲ್ಲಿ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಿಪೆದ್ದಿ ಎಂಬ ಐವರು ಕಾಯಕ ಶರಣರು ಪ್ರಮುಖ ಹಿರಿಯ ಶರಣರಾಗಿದ್ದರು ಎಂದರು.

ವಿವಿಧ ಜಿಲ್ಲೆಗಳಲ್ಲಿ ಈ ಕಾಯಕ ಶರಣರ ಮಠಗಳು ಇಂದಿಗೂ ಇವೆ. ಅವರ ಜೀವನ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಉಳಿದು ಪುಸ್ತಕ ಹಿಡಿಯಬೇಕು. ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಸಂಗನಕಲ್ಲಿನ ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸಮೂರ್ತಿ, 12ನೇ ಶತಮಾನದಲ್ಲಿ ವಚನಗಳು ಮತ್ತು ಬುದ್ಧನ ಕಾಲದಲ್ಲಿ ತ್ರಿಪಿಟಕಗಳೇ ಸಂವಿಧಾನವಾಗಿದ್ದವು. ಕಾಯಕ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಕಂದಾಚಾರ, ಜಾತಿ ಪದ್ಧತಿಗಳನ್ನು ಹೋಗಲಾಡಿಸುತ್ತಿದ್ದರು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನಗಳನ್ನು ಅಧ್ಯಯನ ಮಾಡುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಾಮಣ್ಣ ಮಾತನಾಡಿದರು. ಸಿರುಗುಪ್ಪದ ದಳವಾಯಿ ಅಂಬಣ್ಣ ಮತ್ತು ಸಂಗಡಿಗರು ಶರಣರ ವಚನಗಳನ್ನು ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಹಿರಿಯ ಸಾಹಿತಿ ಎನ್.ಡಿ. ವೆಂಕಮ್ಮ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇತರರು ಉಪಸ್ಥಿತರಿದ್ದರು.

Share this article