ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಸರ್ಕಾರ ಸಿದ್ಧವಾಗಿದ್ದು, ಇದಕ್ಕಾಗಿ 8644 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದು ಭವಿಷ್ಯದ ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡುವ ಬಹುದೊಡ್ಡ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಕೂಡ ಸಮ್ಮತಿ ನೀಡಿದೆ. ಮುಂದಿನ ದಿನಗಳಲ್ಲಿ ಅಣೆಕಟ್ಟುಗಳನ್ನು ಕಟ್ಟುವುದು ಬಹಳ ಕಷ್ಟ. ಆದ್ದರಿಂದ ಪಂಪ್ಡ್ ಸ್ಟೋರೇಜ್ ಮೂಲಕವೇ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ತಿಳಿಸಿದರು.ಈಗಾಗಲೇ ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ. ಇದು ದೇಶದಲ್ಲಿಯೇ ನಂಬರ್ ಒನ್ ಯೋಜನೆಯಾಗಲಿದ್ದು, ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಈ ಯೋಜನೆಗೆ ಪರಿಸರ ಇಲಾಖೆಯವರು ಮತ್ತು ಕೆಲವರು ವಿರೋಧಿಸಬಹುದು. ಅರಣ್ಯ ನಾಶ ಎಂದು ಹೇಳಲುಬಹುದು. ಆದರೆ, ಒಂದು ಒಳ್ಳೆಯ ಉದ್ದೇಶಕ್ಕೆ ಸ್ವಲ್ಪಮಟ್ಟಿಗೆ ಅರಣ್ಯ ನಾಶವಾದರೆ ತೊಂದರೆ ಇಲ್ಲ. ಇಲ್ಲಿ ಕೇವಲ 8.32 ಎಕರೆ ಮಾತ್ರ ನಷ್ಟವಾಗುತ್ತದೆ. ಇದಕ್ಕಾಗಿ ಈಗಾಗಲೇ ರೈತರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಬಗರ್‌ಹುಕುಂ ರೈತರಿಗೂ ಪರಿಹಾರ ಕೊಡಲಾಗುವುದು. ಆದ್ದರಿಂದ ಆದಷ್ಟು ಬೇಗ ಕಾಮಗಾರಿ ಆರಂಭವಾಗಬೇಕು ಎಂದರು.
ಸೇತುವೆ ಉದ್ಘಾಟನೆ ವೇಳೆ ಬಿಜೆಪಿ ನಡೆ ಸರಿಯಿಲ್ಲ:ಶರಾವತಿ ಸೇತುವೆ ಉದ್ಘಾಟನೆ ಆಗಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ಬೇಕು ಅಂತಲೇ ಮುಖ್ಯಮಂತ್ರಿಗಳನ್ನು ತಡವಾಗಿ ಆಹ್ವಾನಿಸಲಾಗಿದೆ. ಈ ಸೇತುವೆಯನ್ನು ನಾನೇ ಮಾಡಿದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಕೊಚ್ಚಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಹಣವೇ ಆಗಿರಬಹುದು. ಆದರೆ, ಇದರಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಯಾವುದೇ ಅಭಿವೃದ್ಧಿ ಯೋಜನೆಗಳು ಯಾರಪ್ಪನ ಮನೆಯಿಂದ ತಂದು ಮಾಡುವುದಿಲ್ಲ, ರಾಜ್ಯದ ಜನರು ಕಟ್ಟಿದ ತೆರಿಗೆ ಹಣವನ್ನು ಇದು ಒಳಗೊಂಡಿರುತ್ತದೆ. ನಾವು ಮಾಡಿದ್ದು ಎಂಬ ಅಹಂಕಾರದಿಂದ ಈ ರೀತಿ ವರ್ತಿಸಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ ಎಂದು ಕಿಡಿಕಾರಿದರು. ಸರ್ಕಾರದ ಕೆಲವು ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಒಂದು ಸುತ್ತು ಶಾಸಕರನ್ನು ಭೇಟಿ ಮಾಡಿ ವಿಷಯ ಸಂಗ್ರಹಿಸಿದ್ದಾರೆ. ಮತ್ತೊಮ್ಮೆ ಸಚಿವರ ಜೊತೆ ಕೂಡ ಮಾತನಾಡುತ್ತಾರೆ. ನನ್ನನ್ನೂ ಮಾತನಾಡಿಸಿದರು. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಶಿ.ಜು.ಪಾಶಾ ಇದ್ದರು.
ತೇಲುವ ಹೋಟೆಲ್‌ಗಳಾಗಿ ಲಾಂಚ್ಸಿಗಂದೂರಿನ ಲಾಂಚ್ಗಳನ್ನು ತೇಲುವ ಹೋಟೆಲ್‌ಗಳಾಗಿ ಪರಿವರ್ತಿಸುವ ಯೋಜನೆ ನನ್ನ ಮುಂದಿದೆ. ಸೇತುವೆ ಆದ ನಂತರ ಲಾಂಚ್‌ಗಳು ಮೂಲೆಗುಂಪಾಗುವ ಸಾಧ್ಯತೆಗಳಿವೆ. ಆದ್ದರಿಂದ ಇದನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಎರಡು ಲಾಂಚ್‍ಗಳನ್ನು ಹೋಟೆಲ್‌ಗಳನ್ನಾಗಿ ಪರಿವರ್ತಿಸಿ ಅಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಪ್ರವಾಸಿಗರು ಬೋಟ್ ಮೂಲಕ ಹೋಗಿ ಹೋಟೆಲ್‍ಗಳಲ್ಲಿ ತಿನಿಸುಗಳನ್ನು ತಿನ್ನಬಹುದು. ಶಾಖಾಹಾರಿ ಮತ್ತು ಮಾಂಸಹಾರಿ ಎರಡೂ ವಿಭಾಗಗಳನ್ನಾಗಿ ಮಾಡುವ ಯೋಜನೆ ಇದೆ. ಮತ್ತು ನಡುಗಡ್ಡೆ ಬಳಸಿಕೊಂಡು ದ್ವೀಪದ ರೀತಿಯನ್ನಾಗಿ ಪರಿವರ್ತಿಸಬಹುದು. ಈ ಯೋಜನೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಅನುಮೋದನೆ ನೀಡುತ್ತಾರೆ ಎಂಬ ಭರವಸೆ ನನಗಿದೆ. ಈಗಾಗಲೇ ಅವರು ಒಪ್ಪಿದ್ದಾರೆ ಎಂದು ಹೇಳಿದರು.