ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ

KannadaprabhaNewsNetwork |  
Published : Sep 24, 2025, 01:01 AM ISTUpdated : Sep 24, 2025, 01:02 AM IST
ಪ್ರಧಾನಿ ಮದ್ಯಪ್ರವೇಶಕ್ಕೆ ಮನವಿ | Kannada Prabha

ಸಾರಾಂಶ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಮಂಡಳಿಯ ಅನುಮತಿ ನೀಡದಂತೆ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಪ್ರಧಾನ ಮಂತ್ರಿಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಮಂಡಳಿಯ ಅನುಮತಿ ನೀಡದಂತೆ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಪ್ರಧಾನ ಮಂತ್ರಿಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಉದ್ದೇಶಿತ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಆಯ್ಕೆ ಮಾಡಿರುವ ಸ್ಥಳವು ಪರಿಸರ ಸೂಕ್ಷ್ಮ ಪಶ್ಚಿಮಘಟ್ಟದ ಶರಾವತಿ ಸಿಂಗಳಿಕ ಅಭಯಾರಣ್ಯ ಪ್ರದೇಶವಾಗಿದ್ದು, ಯುನೆಸ್ಕೋ ಪಟ್ಟಿಯಲ್ಲಿರುವ ಪ್ರಮುಖ ಮಳೆಕಾಡು ಎಂದು ಗುರುತಿಸಲ್ಪಟ್ಟಿದ್ದು ಭೂಕುಸಿತ ವಲಯವಾಗಿದೆ. ಇಂತಹ ಪರಿಸರ ಸೂಕ್ಷ್ಮವಾಗಿರುವ ಈ ಪ್ರದೇಶದಲ್ಲಿ 16 ಸಾವಿರ ಅಪರೂಪದ ಮರಗಳನ್ನು ಕಡಿದು ಅರಣ್ಯ ನಾಶ ಮಾಡಿ, ಭೂಗರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಸ್ಪೋಟಕ ಬಳಸಿ 7 ಕಿಲೋಮೀಟರ್ ಉದ್ದಕ್ಕೆ 30 ಮೀಟರ್ ಅಗಲದಲ್ಲಿ ಸುರಂಗ ಕೊರೆಯುವುದರಿಂದ ಭೂಸಡಿಲಿಕೆಯಾಗುವ ಮತ್ತು ಅದರಿಂದ ಭವಿಷ್ಯದಲ್ಲಿ ಭೂಕುಸಿತ ಉಂಟಾಗುವ ಹಾಗೂ ಜಲಾಶಯದ ಸುರಕ್ಷತೆಗೂ ಅಪಾಯ ಇರುವುದಾಗಿ ವಿವಿಧ ತಜ್ಞರು,ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಆದ್ದರಿಂದ ಈ ಕುರಿತು ಅಗತ್ಯ ಅಧ್ಯಯನ ಆಗದೇ ಮತ್ತು ಪರಿಸರ ಪರಿಣಾಮದ ಕುರಿತು ಅಗತ್ಯ ಮೌಲ್ಯಮಾಪನ ಆಗದೇ ಉದ್ದೇಶಿತ ಯೋಜನೆಯನ್ನು ಅನುಷ್ಠಾನಿಸುವುದಕ್ಕೆ ಹೋರಾಟ ಸಮಿತಿಯ ಹಾಗೂ ಸ್ಥಳೀಯ ಸಾರ್ವಜನಿಕರ ತೀವ್ರ ಆಕ್ಷೇಪ ಇರುವುದಾಗಿ ಅವರು ಸೆ.18ರಂದು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ.

ಉದ್ದೇಶಿತ ಯೋಜನೆಯ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿನಾಂಕ 18/9/2025ರಂದು ಗೇರುಸೊಪ್ಪೆಯಲ್ಲಿ ಏರ್ಪಡಿಸಿದ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಯೋಜನೆಯ ವಿರುದ್ಧ ಸಲ್ಲಿಕೆಯಾಗಿರುವ 4036ಕ್ಕೂ ಹೆಚ್ಚು ಸ್ಥಳೀಯರ ಲಿಖಿತ ಆಕ್ಷೇಪಣೆಗಳು ಮತ್ತು 20000 ಕ್ಕೂ ಮೇಲ್ಪಟ್ಟ ಆನ್ ಲೈನ್ ಆಕ್ಷೇಪಣೆ ಪರಿಗಣಿಸಿ ಅಗತ್ಯ ಅಧ್ಯಯನ ಆಗದೇ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುಮತಿ ನೀಡದಂತೆ ಕ್ರಮ ವಹಿಸಬೇಕೆಂದು ಕೊಚರೇಕರ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೋರಿದ್ದಾರೆ.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ