ಶಿವಮೊಗ್ಗ: ಪರಿಸರಕ್ಕೆ ಮಾರಕವಾಗಿರುವ ಬಹುಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಯೋಜನೆಯನ್ನು ತಕ್ಷಣ ಹಿಂಪಡೆಯದಿದ್ದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದ ಜನರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭೂಮಿಯಡಿ 10 ಮೀಟರ್ ವ್ಯಾಸದ ಸುರಂಗವನ್ನು ನಿರ್ಮಿಸಲಾಗುವುದು. ಅದಕ್ಕೆ 18000 ಟನ್ ಸ್ಫೋಟಕವನ್ನು ಬಳಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಮಾಧ್ಯಮ ಸಂವಾದದಲ್ಲಿ ಇದನ್ನು ಕೇವಲ 1008 ಟನ್ ಬಳಸಲಾಗುವುದು ಎಂದು ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಇದರಿಂದ ಉಂಟಾಗುವ 12 ದಶಲಕ್ಷ ಟನ್ ವಿಷಕಾರಿ ಪದಾರ್ಥವನ್ನು ನದಿಯ ಪಕ್ಕ ಶೇಖರಿಸಲಾಗುತ್ತದೆ. ಕ್ರಮೇಣ ಇದು ನದಿ ಮೂಲಕ ಸಮುದ್ರವನ್ನು ಸೇರುತ್ತದೆ. ಇದರಿಂದ ಉಂಟಾಗುವ ಮಾನವ ಹಾಗೂ ಪರಿಸರ ಹಾನಿಯ ಬಗ್ಗೆ ಅಧಿಕಾರಿಗಳು ಚಕಾರ ಶಬ್ದ ಹೇಳಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ವಿದ್ಯುತ್ ಪ್ರಸರಣಕ್ಕೆ ಖಚಿತವಾಗಿ ಎಷ್ಟು ಅಗಲದ ಜಾಗ ಬೇಕು ಎಂಬುದಕ್ಕೆ ಮಾಹಿತಿಹಕ್ಕು ಮೂಲಕ ಕೇಳಿದರೂ ಸರಿಯಾದ ಉತ್ತರ ಸಿಗಲಿಲ್ಲ. ಅಧಿಕಾರಿಗಳು ಯೋಜನೆಯ ಬಗ್ಗೆ ಸುಳ್ಳು ಹೇಳುವುದರ ಮೂಲಕ ಹೋರಾಟಗಾರರ ಅವಹೇಳನ ಮಾಡಿದ್ದಾರೆ ಎಂದು ದೂರಿದರು.ಧಾರಾವಾಡದ ಐಐಟಿ ಸಂಸ್ಥೆಯ ಪರಿಸರ ಸಲಹಾ ಮಂಡಳಿ ಸದಸ್ಯ ಡಾ.ಎಲ್.ಕೆ. ಶ್ರೀಪತಿ ಮಾತನಾಡಿ, ಕೆಪಿಸಿಎಲ್ ಅಧಿಕಾರಿಗಳು ಪತ್ರಿಕಾ ಸಂವಾದದಲ್ಲಿ, ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಕಾಡು ಕಡಿಯುವ ಸ್ಥಳದಲ್ಲಿ ವನ್ಯಜೀವಿಗಳ ಸಂಚಾರಕ್ಕೆ ಟ್ರೀ-ಕೆನೋಪಿ ನಿರ್ಮಿಸುವುದಾಗಿ ಹೇಳಿದ್ದಾರೆ. ಆದರೆ ಯಾವ ಪ್ರಾಣಿಗಳು ಈ ಟ್ರೀ-ಕೆನೋಪಿಯಲ್ಲಿ ಸಂಚರಿಸುತ್ತವೆ ಎಂಬುದನ್ನು ಇಲಾಖೆಯವರು ಅಧ್ಯಯನ ನಡೆಸಿದ್ದಾರಾ ? ಎಂದು ಪ್ರಶ್ನಿಸಿದರಲ್ಲದೆ ಜಗತ್ತಿನ ಯಾವ ಸ್ಥಳಗಳಲ್ಲಿಯೂ ಇಂತಹ ಕೆನೋಪಿ ಇಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಜಯ್‌ಕುಮಾರ್ ಶರ್ಮಾ ಮಾತನಾಡಿ, ಯೋಜನಾ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ಧ ಚನ್ನಭೈರಾದೇವಿಯ ರಾಜಧಾನಿ ಪ್ರದೇಶವಿದೆ. ಅನೇಕ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ(ಎಎಸ್‌ಐ)ದ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಈ ಸಂರಕ್ಷಿತ ಪ್ರದೇಶದೊಳಗೆ ಕೆಪಿಸಿಎಲ್ ಅಧಿಕಾರಿಗಳು ಯೋಜನೆಯ ಅನುಷ್ಠಾನಕ್ಕೆ ಗುರುತು ಮಾಡಿದರೂ ಎಎಸ್‌ಐ ಅಧಿಕಾರಿಗಳು ಅದನ್ನು ತಡೆಯದೇ ನಿದ್ದೆ ಹೊಡೆಯುತ್ತಿದ್ದಾರೆ ಎಂದು ಕುಟುಕಿದರು.