ಪಾಲಕರು ಮಕ್ಕಳ ಪ್ರೋತ್ಸಾಹಿಸಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಪ್ರಕೃತಿ ಸೌಂದರ್ಯದ ಜತೆ ಯಕ್ಷಗಾನ, ಕ್ರೀಡೆ, ಸಾಹಿತ್ಯ, ಸಂಗೀತದ ಹಲವು ಕಲೆಯ ತವರಾಗಿದೆ

ಹೊನ್ನಾವರ:

ಶರಾವತಿ ನದಿ ಹರಿಯುವ ಈ ತಾಲೂಕಿನಲ್ಲಿ ಪ್ರಕೃತಿ ಸೌಂದರ್ಯದ ಜತೆ ಯಕ್ಷಗಾನ, ಕ್ರೀಡೆ, ಸಾಹಿತ್ಯ, ಸಂಗೀತದ ಹಲವು ಕಲೆಯ ತವರಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್. ವಾಸರೆ ಅಭಿಪ್ರಾಯಪಟ್ಟರು.

ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ 17ನೇ ವರ್ಷದ ಶರಾವತಿ ಉತ್ಸವದ ಅಂಗವಾಗಿ ಶರಾವತಿ ನೀರು ಇರುವ ಕುಂಬಕ್ಕೆ ಆರತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ನದಿಗಳು ವಿದ್ಯುತ್ ಜತೆ ವಿವಿಧ ಸಂಪತ್ತನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ಶರಾವತಿ ಹಲವು ಕೊಡುಗೆ ನೀಡಿರುವುದನ್ನು ಸ್ಮರಿಸಿದರು.

ಶೈಕ್ಷಣಿಕ ಒತ್ತಡದ ನಡುವೆ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪಾಲಕರಿಂದ ಆಗಬೇಕಿದೆ. ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸರ್ಕಾರಗಳು ಪ್ರೋತ್ಸಾಹಿಸಬೇಕು ಎಂದ ಅವರು, ತಾಲೂಕಿನ ಶರಾವತಿ ಉತ್ಸವ ಜಿಲ್ಲಾಮಟ್ಟಕ್ಕೂ ಪಸರಿಸಲಿ ಎಂದು ಶುಭ ಹಾರೈಸಿದರು.

ಚಿಂತಕ ನಾರಾಯಣ ಯಾಜಿ ಸಾಲೇಬೈಲ್ ಮಾತನಾಡಿ, ಮಾನವತ್ವ ಜಾಗೃತಿಯಾಗಲೂ ಸಾಂಸ್ಕೃತಿಕ ಉತ್ಸವ ನೆರೆ ಜಿಲ್ಲೆಯ ವಿರಾಸತ್ ರೂಪದಲ್ಲಿ ಮುಂದಿನ ದಿನದಲ್ಲಿ ಮೂಡಿ ಬರಲಿ ಎಂದರು.

ಗೋ ಪ್ರೇಮಿ ಯೋಗೀಶ ಭಟ್ ಭಟ್ಕಳ, ನಿವೃತ್ತ ಸೈನಿಕರಾದ ಕ್ಯಾಪ್ಟನ ಗಜಾನನ ನಾಯ್ಕ, ಗೋಪ್ರೇಮಿ ಶಿವಾನಂದ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ತಾಲೂಕಾಸ್ಪತ್ರೆಯ ಹೃದಯರೋಗ ತಜ್ಞ ಡಾ. ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವೆಂಕ್ರಟಮಣ ಹೆಗಡೆ, ಗೌರವಾಧ್ಯಕ್ಷ ಪಿ.ಎಸ್. ಭಟ್ ಉಪ್ಪೂಣಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ವೀರಗಾಸೆ ನೃತ್ಯ, ಸರ್ಕಾರಿ ಪ್ರೌಢಶಾಲೆ ಪ್ರಭಾತನಗರ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಕಲಾ ಕೇಂದ್ರ ವಿನುತಾ ಹೆಗಡೆ ಅವರಿಂದ ಭರತನಾಟ್ಯ, ಪೂಜಾ ಹೆಗಡೆ ಬಳಗ ನಾಟ್ಯಂಜಲಿ ಕಲಾ ಕೇಂದ್ರ ಶಿರಸಿ ಅವರಿಂದ ಭರತನಾಟ್ಯ, ವಿದುಷಿ ಅನುರಾಧ ಹೆಗಡೆ ಅವರಿಂದ ಭರತನಾಟ್ಯ ಯಕ್ಷಗೆಜ್ಜೆ ಶಿರಸಿ ಅವರಿಂದ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Share this article