ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಸಬಾ ಪ್ರಾಥಮಿಕ ಸಹಕಾರ ಸಂಘದ ಆಡಳಿತ ಮಂಡಳಿ ಸಹಕಾರದಿಂದಾಗಿ ಷೇರುದಾರ ಸಾಲಗಾರರಿಂದ ಖಾಲಿ ಚೆಕ್‌ಗೆ ಸಹಿ ಪಡೆದು ಸಾಲಗಾರರಿಗೆ ತಿಳಿಯದಂತೆ ಹೆಚ್ಚಿನ ಸಾಲ ಪಡೆದು ವಂಚಿಸಲಾಗಿದೆ. ಸುಮಾರು ನಾಲ್ಕು ನೂರು ಸಾಲಗಾರರ ಹೆಸರಿನಲ್ಲಿ ಒಂದು ಕೋಟಿ ರು.ಗೂ ಹೆಚ್ಚಿನ ಸಾಲ ಪಡೆದು ವಂಚಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣಕ್ಕೆ ಜಾರಿಗೆ ಬರುವಂತೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಷೇರುದಾರರು ಸಂಘದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಹಲುಸುಲಿಗೆ ಗ್ರಾ.ಪಂ ಅಧ್ಯಕ್ಷೆ ಶೋಬಾಕೆಂಪೆಗೌಡ, ಷೇರುದಾರರಾದ ಶಿವಕುಮಾರ್, ಯಖೂಬ್, ಮೀನಾಕ್ಷಿ, ರಂಗಪ್ಪ ಸೇರಿದಂತೆ ಹಲವರಿದ್ದರು.ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕಾಟಿನಾಗರಾಜ್, ಸಂಘದ ಅಭಿವೃದ್ದಿ ಸಹಿಸದೆ ಇಲ್ಲದ ಆರೋಪ ನಡೆಸಲಾಗುತ್ತಿದೆ. ಚುನಾವಣೆಯ ಮೂಲಕ ಅಧಿಕಾರ ಹಿಡಿಯಲು ವಿಫಲರಾದ ಒಂದು ಗುಂಪು ಸೇರಿ ಆಡಳಿತ ಮಂಡಳಿಯ ತೇಜೋವಧೆಗಾಗಿ ಈ ರೀತಿಯ ಆರೋಪ ಮಾಡುತ್ತಿದೆ. ಆಡಳಿತದ ಅವಧಿಯ ಒಂದು ದಶಕದಲ್ಲಿ ಕೇವಲ ಮೂರು ಸಾವಿರ ರು.ಬಾಡಿಗೆ ಬರುತ್ತಿದ್ದ ಸಂಘವನ್ನು ಅಭಿವೃದ್ದಿಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ೭೦ ಸಾವಿರ ರು. ಬಾಡಿಗೆ ಬರುವಂತೆ ಮಾಡಲಾಗಿದೆ. ಅಲ್ಲದೆ ಸಂಘ ಅಭಿವೃದ್ದಿ ಪಥದಲ್ಲಿದ್ದು ಶೀಘ್ರವೇ ಮತ್ತಷ್ಟು ಅಭಿವೃದ್ದಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಷೇರುದಾರ ಹೆಸರಿನಲ್ಲಿ ಆಡಳಿತ ಮಂಡಳಿ ಸಾಲ ಪಡೆಯಲು ಸಾಧ್ಯವಿಲ್ಲ. ಅನವಶ್ಯಕವಾಗಿ ಸಂಘದ ಹೆಸರು ಕೆಡಿಸುತ್ತಿರುವವರ ವಿರುದ್ದ ಮಾನನಷ್ಟ ಮೂಕದ್ದಮೆ ಹೊಡಲು ಚಿಂತನೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ವಡ್ಡರಹಳ್ಳಿ ರಾಜು, ಈಶ್ವರ ಆಳ್ವ, ದೇವರಾಜ್ ಇದ್ದರು.ಕಸಬಾ ಸಹಕಾರ ಸಂಘದಲ್ಲಿ ನಡೆದಿರುವ ಭ್ರಷ್ಟಚಾರದ ತನಿಖೆ ನಡೆಸುವಂತೆ ಒತ್ತಾಯಿಸಿ ಷೇರುದಾರರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.