ಶಿರಸಿ:
ಗೀತೆಯ ಸಂದೇಶವನ್ನು ಸಮಸ್ತ ಜನತೆಗೆ ತಲುಪಿಸುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಾರ್ಯ ಶ್ಲಾಘನೀಯ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಭಗವದ್ಗೀತೆ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ.ಬೆಳಗಾವಿಯ ಗುರುದೇವ ರಾನಡೆ ಮಂದಿರದಲ್ಲಿ ಸ್ವರ್ಣವಲ್ಲೀ ಸಂಸ್ಥಾನ ನಡೆಸುವ ಭಗವದ್ಗೀತೆ ಅಭಿಯಾನ ಅಂಗವಾಗಿ ಗೀತಾ ಅಭಿಯಾನ ಸಮಿತಿ, ಜನಕಲ್ಯಾಣ ಟ್ರಸ್ಟ್ ಹಾಗೂ ಎಸಿಪಿಆರ್ ಸಹಯೋಗದಲ್ಲಿ ನಡೆದ ಗೀತಾ ಸಮನ್ವಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಸ್ವಾರ್ಥದಿಂದ ಮೂಲ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಅತ್ಯಂತ ಸ್ತುತ್ಯಾರ್ಹ. ಬೆಳಗಾವಿಯಲ್ಲಿ ಭಗವದ್ಗೀತೆ ಅಭಿಯಾನ ನಡೆಸುತ್ತಿರುವುದು ಬಹಳ ದೊಡ್ಡ ಕೆಲಸ ಎಂದ ಕೋರೆ, ಡಿ. 23ರಂದು ನಡೆಯಲಿರುವ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನತೆ ಭಾಗವಹಿಸಲಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಭಗವದ್ಗೀತೆಯ ತತ್ವದ ಅಡಿಯಲ್ಲಿ ಎಲ್ಲ ಸಿದ್ಧಾಂತಗಳನ್ನು ಒಂದೇ ಕಡೆ ತರುವ ಪ್ರಯತ್ನದ ಭಾಗವಾಗಿ ಗೀತಾ ಸಮನ್ವಯ ನಡೆಸಲಾಗುತ್ತಿದೆ ಎಂದರು. ಎಲ್ಲದಕ್ಕೂ ಅದರದ್ದೇ ಆದ ಸ್ಥಾನ ಇರಬೇಕು. ಆದರೆ ಅವೆಲ್ಲದರ ಮಧ್ಯೆ ಹೊಂದಾಣಿಕೆ ಇರಬೇಕು. ಅದೇ ಸಮನ್ವಯ ಎಂದರು.ತತ್ವ ಶಾಸ್ತ್ರಗಳಲ್ಲಿ ಕೂಡ ಪರಸ್ಪರ ಹೊಂದಾಣಿಕೆ ಇರುತ್ತದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತತ್ವಗಳ ಮೇಲೆ ಇಲ್ಲಿ ವಿಷಯ ಮಂಡನೆ ನಡೆಯುತ್ತದೆ. ಈ ಮೂರು ಪ್ರಕಾರದ ಚಿಂತನೆಗಳಲ್ಲಿ ಹೊಂದಾಣಿಕೆ ಇರುತ್ತದೆ. ಆ ಕುರಿತ ಚರ್ಚೆಯೇ ಗೀತಾ ಸಮನ್ವಯ ಎಂದು ಶ್ರೀಗಳು, ಎಲ್ಲರಿಗೂ ಅವರವರ ಮತಗಳ ಬಗ್ಗೆ ಗೌರವ ಇರಬೇಕು. ಆದರೆ ಬೇರೆ ಮತಗಳ ಬಗ್ಗೆ ಗೌರವ, ಸಮನ್ವಯ ಇರಬೇಕು ಎಂದೂ ಶ್ರೀಗಳು ಹೇಳಿದರು
ನಂತರ ಸಂಜೆಯವರಗೂ ವಿವಿಧ ಗೋಷ್ಠಿಗಳು ನಡೆದವು. ಭಗವದ್ಗೀತೆ ಮತ್ತು ಶರಣ ಸಾಹಿತ್ಯ ಕುರಿತು ನಿವೃತ್ತ ಪ್ರಾಚಾರ್ಯ ಡಾ. ವಿ.ಎಸ್. ಮಾಳಿ, ಆಳ್ವಾರ್ ಸಾಹಿತ್ಯ ಕುರಿತು ಮೈಸೂರು ಸಂಸ್ಕೃತ ಕಾಲೇಜಿನ ಡಾ. ಎಂ. ಆನಂದ, ಭಗವದ್ಗೀತೆ ಮತ್ತು ದಾಸ ಸಾಹಿತ್ಯ ಕುರಿತು ಇಸ್ಕಾನ್ ನ ನಾಗೇಂದ್ರ ದಾಸ ಹಾಗೂ ಪಂಡಿತ ಶ್ರೀನಿಧಿ ಆಚಾರ್ ಜಮ್ನೀಸ್, ಭಗವದ್ಗೀತೆ ಮತ್ತು ರಾಮಕೃಷ್ಣ- ವಿವೇಕಾನಂದ ಸಾಹಿತ್ಯ ಕುರಿತು ರಾಮಕೃಷ್ಣ ಆಶ್ರಮದ ಶ್ರೀ ನಿತ್ಯಸ್ಥಾನಂದ ಸ್ವಾಮಿಗಳು ಮತ್ತು ಶ್ರೀ ಕ್ಷೇತ್ರ ಶಕಟಪುರದ ಮಧುಸೂದನ್ ಶಾಸ್ತ್ರೀ ಹಂಪಿಹೊಳಿ ವಿಷಯಗಳನ್ನು ಮಂಡಿಸಿದರು.ಮೈಸೂರಿನ ಭಾರತೀ ಯೋಗಧಾಮದ ಯೋಗ ರತ್ನ ಡಾ. ಕೆ.ಎಲ್. ಶಂಕರನಾರಾಯಣ ಜೋಯಿಸ್ ಸಮಾರೋಪ ಭಾಷಣ ಮಾಡಿದರು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ವಾನ್ ಸೂರ್ಯನಾರಾಯಣ ಭಟ್, ಎಸಿಪಿಆರ್ ಗೌರವ ಕಾರ್ಯದರ್ಶಿ ಎಂ.ಬಿ. ಜಿರಲಿ, ರಾಮ ಭಂಡಾರಿ, ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ. ಹೆಗಡೆ, ಸೀತಾರಾಮ ಭಾಗವತ, ಶ್ರೀಧರ ಗುಮ್ಮಾನಿ, ವೆಂಕಟ್ರಮಣ ಹೆಗಡೆ, ಗಣೇಶ ಹೆಗಡೆ, ಅರುಣ ನಾಯ್ಕ್, ಸುಬ್ರಹ್ಮಣ್ಯ ಹೆಗಡೆ, ಸಿ.ಜಿ. ಶಾಸ್ತ್ರಿ, ಶ್ರೀಪಾದ ಭಟ್, ವಿನಾಯಕ ಹೆಗಡೆ ಮೊದಲಾದವರಿದ್ದರು.
ಅಭಿಯಾನ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಹಾಗೂ ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಮಾತೆಯರಿಂದ ಭಗವದ್ಗೀತೆ ಪಠಣ ನಡೆಯಿತು.