ಗುಂಡ್ಲುಪೇಟೇಲಿ ಸಂಭ್ರಮದ ಷಷ್ಠಿ ಆಚರಣೆ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಗುಂಡ್ಲುಪೇಟೆ ಪಟ್ಟಣದಲ್ಲಿ ದೊಡ್ಡ ಆಲದ ಮರದ ಬಳಿಯ ಹುತ್ತಕ್ಕೆ ಷಷ್ಠಿ ಹಬ್ಬದ ಹಿನ್ನೆಲೆ ಅನೇಕ ಮಹಿಳೆಯರು, ಮಕ್ಕಳು ಹಾಲು, ಬೆಣ್ಣೆ ಎರೆದು ಸಂಭ್ರಮಿಸಿದರು

ಹುತ್ತಕ್ಕೆ ಸಾವಿರಾರು ಮಹಿಳೆಯರು, ಮಕ್ಕಳಿಂದ ಹುತ್ತಕ್ಕೆ ಹಾಲು , ಬೆಣ್ಣೆ । ಬೇಗೂರು, ಹಂಗಳ, ತೆರಕಣಾಂಬಿ, ಕಸಬಾ ಸೇರಿ ವಿವಿಧ ಗ್ರಾಮ ಜನರು ಭಾಗಿ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಾರ್ತಿಕ ಮಾಸದ ಷಷ್ಠಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಸಂಭ್ರಮ, ಸಡಗರದಿಂದ ಹುತ್ತಕ್ಕೆ ತನಿ ಎರೆದು ಭಕ್ತಿ ಭಾವದಿಂದ ಆಚರಿಸಿದರು.

ಪಟ್ಟಣದ ದುಂದಾಸನಪುರ ರಸ್ತೆಯ ಬಳಿಯ ದೊಡ್ಡ ಆಲದ ಮರದ ಬಳಿಯಿರುವ ಹುತ್ತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಆಗಮಿಸಿ ಹಾಲು, ಬೆಣ್ಣೆ ಸುರಿದು ಭಕ್ತಿಯನ್ನು ಮೆರೆದರು. ತಾಲೂಕಿನ ಬೇಗೂರು, ಹಂಗಳ, ತೆರಕಣಾಂಬಿ ಹಾಗೂ ಕಸಬಾ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಜನರು ಬೆಳಗಿನ ಉಪವಾಸದೊಂದಿಗೆ ಷಷ್ಠಿ ಹಬ್ಬದಲ್ಲಿ ಭಾಗವಹಿಸಿದ್ದರು.

ಗುಂಡ್ಲುಪೇಟೆ ಬಳಿಯ ದೊಡ್ಡ ಆಲದ ಮರದ ಬಳಿ ಕುಳಿತಿದ್ದವರಿಗೆ ಷಷ್ಠಿ ಹಬ್ಬದ ಹಿನ್ನೆಲೆ ಬಾಳೆ ಹಣ್ಣು, ವಡೆ ಹಾಗೂ ಕಾಸು ನೀಡಿ ತೆರಳುತ್ತಿದ್ದ ದೃಶ್ಯ ಕಂಡು ಬಂತು.

ಪಟ್ಟಣದ ಬಳಿಯ ಕಬ್ಬೇಕಟ್ಟೇ ಶನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿಯು ಜನರು ಹುತ್ತಕ್ಕೆ ತನಿ ಎರೆಯಲು ಮುಗಿ ಬಿದ್ದಿದ್ದರು.

ಸುಬ್ರಹ್ಮಣ್ಯನಿಗೆ ಕುಂಕುಮ, ಅರಿಶಿಣ ಅಭಿಷೇಕ

ಗುಂಡ್ಲುಪೇಟೆ ಸುಬ್ರಹ್ಮಣ್ಯ ಷಷ್ಟಿ ಹಿನ್ನೆಲೆ ಪಟ್ಟಣದ ಚಾಮರಾಜನಗರ ರಸ್ತೆಯ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಮೂಲ ವಿಗ್ರಹಕ್ಕೆ ಹಾಲು, ಮೊಸರು, ಎಳನೀರು, ಕುಂಕುಮ, ಅರಿಶಿಣ ಅಭಿಷೇಕ ನಡೆಯಿತು. ಮೂಲ ವಿಗ್ರಹಕ್ಕೆ ಹಲವು ಬಗೆಯ ಫಲಪುಷ್ಪಗಳಿಂದ ಹಾಗೂ ವಸ್ತ್ರದಿಂದ ವಿಶೇಷ ಅಲಂಕಾರವನ್ನು ದೇವಸ್ಥಾನದ ಅರ್ಚಕರು ಮಾಡಿದ್ದರು.

ನಾಗರ ಪೂಜೆ

ಷಷ್ಟಿ ಹಿನ್ನೆಲೆ ದೇವಸ್ಥಾನದ ಮುಂಭಾಗ ಇರುವ ಅರಳಿಮರದ ಕೆಳಗಿನ ನಾಗರ ಕಲ್ಲಿಗೆ ಮಹಿಳೆಯರು ಸೇರಿದಂತೆ ಮಕ್ಕಳು ಕುಟುಂಬ ಸಮೇತವಾಗಿ ಆಗಮಿಸಿ ತನಿ ಎರೆದು ಭಕ್ತಿ ಮೆರೆದರು.

ಗುಂಡ್ಲುಪೇಟೆ-ದುಂದಾಸನಪುರ ರಸ್ತೆ ಬಳಿಯ ದೊಡ್ಡ ಆಲದ ಮರದ ಹುತ್ತದಕ್ಕೆ ಜನರು ಹಾಲು, ಬೆಣ್ಣೆಯೊಂದಿಗೆ ತನಿ ಎರೆದರು.

ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೂಲ ವಿಗ್ರಹ.

Share this article