ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ‘ಪ್ರವರ್ಗ 2-ಎ ನಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು? ಎಂದು ಕುರುಬರ ಬಗ್ಗೆ ಅವಹೇಳನಕಾರಿ ಹಾಗೂ ಹಿಂದುಳಿದ ವರ್ಗಗಳ ಒಗ್ಗಟ್ಟು ಒಡೆಯುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡಲೇ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕುತ್ತೇವೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಜಾತಿಗಣತಿ ವರದಿಯನ್ನು ಅನಗತ್ಯ ವಿರೋಧ ಮಾಡುತ್ತಿರುವ ನಾಯಕರನ್ನು ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತರು ಒಟ್ಟಾಗಿ ಖಂಡಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಅಂತಹ ನಾಯಕರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವಿ.ಸೋಮಶೇಖರ್, ‘ಕುಮಾರಸ್ವಾಮಿ ಅವರು ಬೆಣ್ಣೆ ತಿಂದವರು ಯಾರು ಎಂದು ಕೇಳಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಯಾರಿಗೆ ಅರ್ಹತೆ ಇದೆಯೋ ಅವರು ಬೆಣ್ಣೆ ತಿನ್ನುತ್ತಾರೆ. ನಿಮಗೇನು ಹೊಟ್ಟೆ ನೋವು? ಈ ರಾಜ್ಯ ನಿಮ್ಮ ಮನೆಯ ಸ್ವತ್ತೇ? ಕೃಷ್ಣ ಅವರು ಕೆಪಿಎಸ್‌ಎಸಿ ಅಧ್ಯಕ್ಷರಾಗಿದ್ದಾಗ ನೀವು ಏನೆಲ್ಲಾ ಮಾಡಿದಿರಿ? ಎಲ್ಲಾ ವರ್ಗಗಳ ಮೀಸಲಾತಿ ನುಂಗಿ ನಿಮಗೆ ಬೇಕಾದವರಿಗೆ ಹೇಗೆ ಉದ್ಯೋಗ ಕೊಡಿಸಿದಿರಿ. ಈ ರೀತಿ ಅಕ್ರಮಗಳನ್ನು ಏನಾದರೂ ನಾವು ಮಾಡಿದ್ದೇವೆಯೇ’ ಎಂದು ಪ್ರಶ್ನಿಸಿದರು.
ವರದಿ ಬಗ್ಗೆ ಅಪಸ್ವರ ಎತ್ತುವ ನೀವು ಮುಖ್ಯಮಂತ್ರಿ ಆಗಿದ್ದಾಗ ಯಾಕೆ ವರದಿ ಪಡೆದು ಸಾದಕ-ಬಾಧಕ ಚರ್ಚೆ ಮಾಡಲಿಲ್ಲ. ವರದಿ ಪಡೆಯಲೇ ಧೈರ್ಯವಿಲ್ಲದ ನೀವು ಬೆಣ್ಣೆ ತಿಂದರು ಎಂದರೆ ಹೇಗೆ? ಕೂಡಲೇ ಹೇಳಿಕೆ ಹಿಂಪಡೆದು ಕ್ಷಮೆ ಕೋರದಿದ್ದರೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಸಿದರು.
ಸಂಘದ ಖಜಾಂಚಿ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಪಾಲನ್ನು ಪಡೆಯುವುದು ಸಹಜ. ಅಲೆಮಾರಿ, ಆದಿವಾಸಿಗಳು ಸವಲತ್ತುಗಳಿಂದ ಹೊರಗುಳಿದಿದ್ದಾರೆ. ಅವರನ್ನು ಸೇರಿಸಲು ಆಯೋಗ ಶಿಫಾರಸು ಮಾಡಿದೆ. 1.66 ಲಕ್ಷ ಮಂದಿ ಸರ್ಕಾರಿ ಸಿಬ್ಬಂದಿ ನಿಯಮಾನುಸಾರ ಕೆಲಸ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಇದಕ್ಕೆ ವಿರೋಧಿಸುವ ಎಚ್.ಡಿ. ಕುಮಾರಸ್ವಾಮಿಗೆ ಪ್ರಜ್ಞೆ ಇರಬೇಕು ಎಂದು ಕಿಡಿ ಕಾರಿದರು.
ಬೆಣ್ಣೆ ತಿಂದವರು ನೀವಲ್ಲವೇ?:
ಸಂಘದ ಮಾಜಿ ಉಪಾಧ್ಯಕ್ಷ ಬಿ.ಟಿ. ಜಗದೀಶ್ ಮಾತನಾಡಿ, ಹಿಟ್ ಆ್ಯಂಡ್ ರನ್ ಕುಮಾರಸ್ವಾಮಿ ಅವರೇ ಜಾತ್ಯತೀತ ನಾಯಕ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಕೆಪಿಎಸ್‌ಸಿಯಲ್ಲಿ ಕೃಷ್ಣ ಅವರಿದ್ದಾಗ, ನಿಮ್ಮ ಅಣ್ಣ ಲೋಕೋಪಯೋಗಿ, ಇಂಧನ ಸಚಿವರಾಗಿದ್ದಾಗ ಬರೀ ಒಕ್ಕಲಿಗರಿಗೆ ಸರ್ಕಾರಿ ಉದ್ಯೋಗ ನೀಡಿದ್ದೀರಿ. ಹಾಗಿದ್ದರೆ ಬೆಣ್ಣೆ ತಿಂದಿರುವುದು ಯಾರು ಎಂದು ಪ್ರಶ್ನಿಸಿದರು.
ಶಾಮನೂರುಗೆ ಸವಾಲು
ಜಾತಿಗಣತಿ ವರದಿ ಮಾಡುವವರು ನಮ್ಮ ಮನೆಗೇ ಬಂದಿಲ್ಲ. ಸರ್ಕಾರ ಹೇಗೆ ನಡೆಸುತ್ತಾರೆ ನೋಡೋಣ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರಿಗೆ ಒಂದು ಮನೆ ಇದ್ದಿದ್ದರೆ ಯಾವ ಮನೆಗೆ ಬಂದು ಸಮೀಕ್ಷೆ ನಡೆಸಿದ್ದರು ಎಂಬುದು ಗೊತ್ತಾಗುತ್ತಿತ್ತು ಎಂದು ಬಿ.ಟಿ.ಜಗದೀಶ್ ಹೇಳಿದರು.
ಶಾಮನೂರು ಶಿವಶಂಕರಪ್ಪ ಹಾಗೂ ಅವರ ಮಗ (ಸಚಿವ ಎಸ್.ಎಸ್. ಮಲ್ಲಿಕಾರ್ಜುನ್) ಹಾಗೂ ಸೊಸೆ (ಸಂಸದೆ ಪ್ರಭಾ ಮಲ್ಲಿಕಾರ್ಜುನ್) ಮೂವರೂ ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲಿ. ನಾವು ಏನೆಂದು ತೋರಿಸುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ವಿ.ಸೋಮಶೇಖರ್ ಸವಾಲು ಎಸೆದರು.