ಹುಬ್ಬಳ್ಳಿ:
ಬೀಗರ ಊರಾದ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚುನಾಯಿತರಾಗುವ ಮೂಲಕ ರಾಜಕಾರಣದಲ್ಲಿ ಮರುಜನ್ಮ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಶಾಸಕ, ಕಾಂಗ್ರೆಸ್ ವಿಪ ಸದಸ್ಯ, ಬಿಜೆಪಿ ಸಂಸದರಾಗಿ ಹೀಗೆ ತಮ್ಮ ರಾಜಕೀಯ ಜೀವನದ 3ನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದರೊಂದಿಗೆ 30-35 ವರ್ಷದ ಬಳಿಕ ಹುಬ್ಬಳ್ಳಿ-ಧಾರವಾಡ ರಾಜಕಾರಣದಿಂದ ದೂರವಾದಂತೆ ಆಗಿದೆ.1990 ರಿಂದ ಸಕ್ರಿಯ ರಾಜಕಾರಣದಲ್ಲಿರುವ ಶೆಟ್ಟರ್, ಒಂದು ಹಂತದಲ್ಲಿ ಅದೃಷ್ಟದ ರಾಜಕಾರಣಿ ಎಂದೇ ಹೆಸರು ಪಡೆದವರು. ಸರಳ, ಸಜ್ಜನಿಕೆಗೆ ಹೆಸರಾದವರು. ಕುಟುಂಬದಲ್ಲೇ ಜನಸಂಘದ ರಕ್ತ ಹೊಂದಿರುವ ಶೆಟ್ಟರ್, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಲ್ಲಿ ಒಬ್ಬರು.
ಈದ್ಗಾ ಮೈದಾನ ಹೋರಾಟದಲ್ಲಿ ಸಕ್ರಿಯವಾಗಿ ತೊಡಗುವ ಮೂಲಕ ಮುಂಚೂಣಿಗೆ ಬಂದ ನಾಯಕರಲ್ಲಿ ಶೆಟ್ಟರ್ ಕೂಡ ಒಬ್ಬರು. 1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದರು. ಅಲ್ಲಿಂದ ರಾಜಕಾರಣದಲ್ಲಿ ಹಿಂದಿರುಗಿ ನೋಡಿದವರೇ ಅಲ್ಲ. ಬರೋಬ್ಬರಿ 6 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ಸ್ಪೀಕರ್, ಸಚಿವಗಿರಿ ಹೀಗೆ ಹಲವು ಹುದ್ದೆಗಳು ಅವರನ್ನು ಅರಸಿಕೊಂಡು ಬಂದಿದ್ದವು.ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸಿತು. ಇದರಿಂದ ಮುನಿಸಿಕೊಂಡು ಕಾಂಗ್ರೆಸ್‌ಗೆ ಜಿಗಿದಿದ್ದರು. ಆದರೆ ಮೊದಲ ಬಾರಿಗೆ ಅದೃಷ್ಟ ಕೈಕೊಟ್ಟಿತು. ಚುನಾವಣೆಯಲ್ಲಿ ತಮ್ಮ ಶಿಷ್ಯನ ಎದುರಿಗೆ ಸೋಲನ್ನುಭವಿಸಿದರು. ಆದರೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಶೆಟ್ಟರ್ ಪಕ್ಷ ಬಿಟ್ಟಿದ್ದರ ಪರಿಣಾಮವನ್ನು ಬಿಜೆಪಿ ಎದುರಿಸುವಂತಾಗಿತ್ತು. ಕೆಲವೆಡೆ ಪಕ್ಷದ ಅಭ್ಯರ್ಥಿಗಳು ಸೋತಿದ್ದುಂಟು.
ಇವರು ತಮ್ಮ ಚುನಾವಣೆಯಲ್ಲಿ ಸೋತಿದ್ದರೂ ಪಕ್ಷಕ್ಕೆ ಆದ ಲಾಭದಿಂದಾಗಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿತ್ತು. ಆದರೆ ರಕ್ತದಲ್ಲೇ ಜನಸಂಘವನ್ನು ಮೈಗೂಡಿಸಿಕೊಂಡಿದ್ದ ಶೆಟ್ಟರ್‌ಗೆ ಕಾಂಗ್ರೆಸ್‌ನ ಸಂಸ್ಕೃತಿ ಒಗ್ಗಲಿಲ್ಲ. ಹೀಗಾಗಿ ಕಳೆದ ಜನವರಿಯಲ್ಲಿ ಮರಳಿ ಮತ್ತೆ ಬಿಜೆಪಿಗೆ ಬಂದಿದ್ದರು.ಕೊನೆಗೆ ಬೆಳಗಾವಿ ಫಿಕ್ಸ್:
ಬಿಜೆಪಿಗೆ ಮರಳಿದ ಶೆಟ್ಟರ್, ಲೋಕಸಭಾ ಚುನಾವಣೆಯಲ್ಲಿ ಧಾರವಾಡ, ಹಾವೇರಿ- ಗದಗ ಕ್ಷೇತ್ರಗಳನ್ನು ಕೇಳಿದ್ದರು. ಆದರೆ ಹೈಕಮಾಂಡ್ ಎರಡು ಕ್ಷೇತ್ರಗಳನ್ನು ಬಿಟ್ಟು ಬೆಳಗಾವಿಗೆ ಕಣಕ್ಕಿಳಿಸಿತ್ತು. ಹೈಕಮಾಂಡ್‌ಗೆ ಮಾತಿಗೆ ಒಪ್ಪಿ, ಬೆಳಗಾವಿಯಿಂದ ಸ್ಪರ್ಧೆಗಿಳಿದಿದ್ದರು. ಅಲ್ಲೂ ತಮ್ಮ ಕಮಾಲ್ ತೋರಿಸಿ ಇದೀಗ ಬರೋಬ್ಬರಿ 1,75,524 ಮತಗಳ ಭಾರೀ ಅಂತರದಿಂದ ಗೆಲುವು ಕಂಡಿದ್ದಾರೆ. ಶೆಟ್ಟರ್ ಗೆಲ್ಲುತ್ತಾರೆ ಆದರೆ ಇಷ್ಟೊಂದು ಲೀಡ್ ಬರುತ್ತದೆ ಎಂಬ ನಂಬಿಕೆ ಬಿಜೆಪಿಗರಿಗೆ ಇರಲಿಲ್ಲ. ನಿರೀಕ್ಷೆಗೂ ಮೀರಿ ಶೆಟ್ಟರ್ ಗೆದ್ದಿದ್ದಾರೆ. ಈ ಮೂಲಕ ತಮ್ಮ ಬೀಗರಾದ ದಿ. ಸುರೇಶ ಅಂಗಡಿ ನಂತರ ಮಂಗಲಾ ಅಂಗಡಿ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಂಡಂತಾಗಿದೆ.35 ವರ್ಷದ ನಂಟು:
ಹುಬ್ಬಳ್ಳಿ-ಧಾರವಾಡದ ರಾಜಕಾರಣದೊಂದಿಗೆ ಶೆಟ್ಟರ್ ನಂಟು ಬರೋಬ್ಬರಿ 35 ವರ್ಷಕ್ಕೂ ಅಧಿಕ ಕಾಲದ್ದು. 1994ರಲ್ಲಿ ಶೆಟ್ಟರ್ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗೆ ನೋಡಿದರೆ ಅದಕ್ಕಿಂತ ಮುಂಚೆ ಅಂದರೆ 1990ರಿಂದಲೇ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡವರು. ಅಲ್ಲಿಂದ ಈ ವರೆಗೆ ಸಕ್ರಿಯ ರಾಜಕಾರಣದಲ್ಲಿ ಇದ್ದರು. ಒಂದು ಹಂತದಲ್ಲಿ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಎಂಬಂತೆ ಇದ್ದವರು ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ. ಇದೀಗ ತಮ್ಮ 30- 35 ವರ್ಷದ ಇಲ್ಲಿನ ರಾಜಕಾರಣ ಬಿಟ್ಟು ಶೆಟ್ಟರ್ ಬೆಳಗಾವಿ ರಾಜಕಾರಣಕ್ಕೆ ಶಿಫ್ಟ್ ಆಗಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಅವರ ಅಭಿಮಾನಿಗಳೆಲ್ಲ ಅಲ್ಲಿಗೆ ತೆರಳಿ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಶೆಟ್ಟರ್ ಗೆದ್ದಿದ್ದಕ್ಕೆ ಖುಷಿ ಪಟ್ಟಿದ್ದಾರೆ. ಆದರೆ ಹುಬ್ಬಳ್ಳಿ- ಧಾರವಾಡದಿಂದ ತೆರಳಿರುವುದಕ್ಕೆ ಬೇಸರ ಪಟ್ಟಿದ್ದಾರೆ.ಮಂತ್ರಿಯಾಗ್ತಾರಾ?
ಇದೀಗ ಶೆಟ್ಟರ್ ಒಳ್ಳೆಯ ಲೀಡ್‌ನಲ್ಲಿ ಗೆದ್ದಿದ್ದಾರೆ. ಜತೆಗೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಹೌದು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದರೆ ಅದರಲ್ಲಿ ಮಂತ್ರಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಶೆಟ್ಟರ್ ಕೂಡ ಮಂತ್ರಿಯಾಗಲಿ ಎಂಬುದು ಅವರ ಅಭಿಮಾನಿಗಳ ಆಶಯ.ಹಿಂದೆಯೇ ಸಂಸದರಾಗಬೇಕಿತ್ತು..!
ಹಾಗೆ ನೋಡಿದರೆ ಜಗದೀಶ ಶೆಟ್ಟರ್ ಈ ಹಿಂದೆಯೇ ಸಂಸದರಾಗಿ ದೆಹಲಿ ರಾಜಕಾರಣಕ್ಕೆ ಹೋಗಬೇಕಿತ್ತು. 2004ರಲ್ಲಿ ವಿಜಯ ಸಂಕೇಶ್ವರ ಬಿಜೆಪಿಗೆ ರಾಜೀನಾಮೆ ಕೊಟ್ಟು ಕನ್ನಡನಾಡು ಪಕ್ಷ ಕಟ್ಟಿದ್ದರು. ಆಗ ಲೋಕಸಭೆಗೆ ಸ್ಪರ್ಧಿಸುವಂತೆ ಪಕ್ಷದ ಹೈಕಮಾಂಡ್ ಹೇಳಿತ್ತು. ಆದರೆ ಶೆಟ್ಟರ್ ಮಾತ್ರ ತಾವು ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಹೇಳಿದ್ದರು. ಇವರು ಟಿಕೆಟ್ ನಿರಾಕರಿಸಿದ ಬಳಿಕ ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್ ಸಿಕ್ಕಿತ್ತು. ಆದರೆ ಇದೀಗ ರಾಷ್ಟ್ರ ರಾಜಕಾರಣದತ್ತ ಶೆಟ್ಟರ್ ಮುಖ ಮಾಡಿದಂತಾಗಿದೆ.