ಬಿಜೆಪಿಗೆ ಇಂದು ಶೆಟ್ಟರ್‌ ಬೆಂಬಲಿಗರ ಮರುಸೇರ್ಪಡೆ

KannadaprabhaNewsNetwork |  
Published : Feb 28, 2024, 02:30 AM IST
ಶೆಟ್ಟರ್ | Kannada Prabha

ಸಾರಾಂಶ

ಮಾಜಿ ಸಿಎಂ ಶೆಟ್ಟರ ಬೆಂಬಲಿಗರು ಫೆ. 28ರಂದು ಬೆಳಗ್ಗೆ 11ಕ್ಕೆ ಬಿಜೆಪಿ ಕಚೇರಿಯಲ್ಲಿ ಮರುಸೇರ್ಪಡೆಗೊಳ್ಳಲಿದ್ದಾರೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಬೆಂಬಲಿಗರನ್ನು ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಅವರ ಎಲ್ಲ ಬೆಂಬಲಿಗರನ್ನು ಫೆ. 28ರಂದು ಬೆಳಗ್ಗೆ 11ಕ್ಕೆ ಪಕ್ಷದ ಕಚೇರಿಯಲ್ಲಿ ಮರುಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಇದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿದ್ದರೂ ಪಕ್ಷದ ವರ್ತನೆಯಿಂದ ಮುನಿಸಿಕೊಂಡಿದ್ದ ಮಾಜಿ ಸಿಎಂ ಶೆಟ್ಟರ್‌ ಮುನಿಸು ತಣಿಸುವ ಕಾರ್ಯಕ್ಕೆ ಮುಂದಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರ ಸಮ್ಮುಖದಲ್ಲಿ 90ಕ್ಕೂ ಹೆಚ್ಚು ಶೆಟ್ಟರ್‌ ಬೆಂಬಲಿಗರನ್ನು ಮರಳಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ.

ಗರಂ ಆಗಿದ್ದ ಶೆಟ್ಟರ:

ತಮ್ಮ ಬೆಂಬಲಿಗರಲ್ಲಿ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳಲು ಬ್ಲಾಕ್‌ ಮತ್ತು ಬೂತ್‌ ಮಟ್ಟದ ಕಾರ್ಯಕರ್ತರಲ್ಲಿ ವಿರೋಧ ವ್ಯಕ್ತವಾಗಿತ್ತು. ಆ ಕುರಿತು ಜಿಲ್ಲಾಧ್ಯಕ್ಷ ಮಜ್ಜಗಿ ಅವರು ಮುಖಂಡರ ಸಭೆ ನಡೆಸಿ ಚರ್ಚಿಸಿದರೂ ಯಾವುದೇ ಪ್ರಯೋಜನಕ್ಕೆ ಬಂದಿರಲಿಲ್ಲ. ಇದೇ ವಿಷಯವಾಗಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕರ ಜತೆ ಸಭೆ ನಡೆಸಿದ್ದರೂ, ಸಂಧಾನ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಭಾನುವಾರ ರಾತ್ರಿ ಮತ್ತೆ ಸಭೆ ನಡೆಸಿ ಚರ್ಚಿಸಲಾಗಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದಾಗ ಕೆಲವರು ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬಂದಾಗ ಗರಂ ಆದ ಜಗದೀಶ ಶೆಟ್ಟರ, ನಾನು ಮಾಜಿ ಸಿಎಂ ಇದ್ದರೂ, ಪಕ್ಷದಲ್ಲಿದ್ದಾಗ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಬಹಳಷ್ಟು ಕಾರ್ಯಕರ್ತರು, ನನ್ನ ಮನಸ್ಸಿಗೆ ನೋವಾಗುವಂತೆ ನನ್ನ ವಿರುದ್ಧವೇ ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಂತ ಅವರೆಲ್ಲರನ್ನು ವಿರೋಧಿಸಲಾಗುತ್ತದೆಯೇ? ಇನ್ನೊಂದು ಪಕ್ಷದಲ್ಲಿ ಇದ್ದಾಗ ಟೀಕೆ ಟಿಪ್ಪಣೆ ಸಹಜ ಎಂದು ಸಿಟ್ಟಿನಿಂದಲೇ ಹೇಳಿದ್ದಾರೆನ್ನಲಾಗಿದೆ.

ಶೆಟ್ಟರ ಸಿಟ್ಟಾಗುತ್ತಿದ್ದಂತೆ ಜಿಲ್ಲೆಯ ಮುಖಂಡರು, ಯಾವುದೇ ವಿರೋಧ ಮಾಡದೇ ಎಲ್ಲರನ್ನೂ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯ ವಿವಿಧ ಹುದ್ದೆಗಳ ಜತೆಗೆ ಮೂರು ವರ್ಷ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಹುಡಾ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಬದಲಾದ ರಾಜಕೀಯ ಬೆಳವಣಿಗೆಯಿಂದ ಸ್ವಲ್ಪ ದಿನ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದೆ. ಇದೀಗ ಮತ್ತೆ ಬಿಜೆಪಿ ಸೇರ್ಪಡೆ ಸಂತಸ ತಂದಿದೆ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ ಶೆಟ್ಟರ ಬೆಂಬಲಿಗರ ಸೇರ್ಪಡೆಗೆ ಬೂತ್‌ ಮಟ್ಟದ ಕೆಲ ಕಾರ್ಯಕರ್ತರ ಅಸಮಾಧಾನವಿತ್ತು. ಅದೆಲ್ಲವನ್ನು ಸರಿಪಡಿಸಿ ಎಲ್ಲರನ್ನೂ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆ.28ರಂದು ಪಕ್ಷದ ಕಾರ್ಯಾಲಯದಲ್ಲಿ ಮರುಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ತಿಳಿಸಿದ್ದಾರೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ