ಬ್ಯಾಡಗಿ: ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯಗಳಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡವು 19 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಎರಡೂ ವಿಭಾಗದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡವು ಬ್ಯಾಡಗಿ ಎಸ್‌ಜೆಜೆಎಂ ತಂಡವನ್ನು 08 (20-12) ಅಂಕಗಳಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 10 ಅಂಕಗಳ (14-04) ಮುನ್ನಡೆ ಸಾಧಿಸಿದ್ದ ಶಿಡೇನೂರ ತಂಡವು ಸಾಂಘಿಕ ಹೋರಾಟದಿಂದ ಜಯಗಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಸಚಿನ್ ಬೆಸ್ಟ್ ಡಿಫೆಂಡರ್, ಎಸ್‌ಜೆಜೆಎಮ್ ಪ್ರಶಾಂತ್ ಬೆಸ್ಟ ರೈಡರ್ ಮೋಟೆಬೆನ್ನೂರ ಸರ್ಕಾರಿ ಕಾಲೇಜಿನ ಆಟಗಾರ ವಿನಯ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.
ಮೇಲುಗೈ ಸಾಧಿಸಿದ ಬಾಲಕಿಯರು: ಬಾಲಕಿಯರ 19 ವರ್ಷದೊಳಗಿನ ವಿಭಾಗದಲ್ಲಿ ಶಿಡೇನೂರಿನ ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು ತಂಡವು ಬ್ಯಾಡಗಿ ಎಸ್‌ಜೆಜೆಎಂ ತಂಡವನ್ನು 05 (33-28) ಅಂಕಗಳಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 8 ಅಂಕಗಳ (19-1) ಮುನ್ನಡೆ ಸಾಧಿಸಿದ್ದ ಶಿಡೇನೂರು ತಂಡದ ಬಾಲಕಿಯರು ಅಂತಿಮವಾಗಿ ಗೆಲುವಿನ ದಡವನ್ನು ಸೇರಿದರು. ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜಿನ ರೇಖಾ ಬೆಸ್ಟ್ ಡಿಫೆಂಡರ್, ಅರ್ಪಿತಾ ಬೆಸ್ಟ ರೈಡರ್, ರುಕ್ಸಾರ ಖತೀಬ್ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.17 ವರ್ಷದ ಬಾಲಕಿಯರು ಘಾಳಪೂಜಿಗೆ ಪ್ರಶಸ್ತಿ: ಛಲ ಬಿಡದೇ ಮುನ್ನುಗ್ಗಿದ ಆಂಜನೇಯ ಪ್ರೌಢಶಾಲೆಯ ಬಾಲಕಿಯರು ಕೇವಲ 02 (13-11) ಅಂಕಗಳಿಂದ 17 ವರ್ಷದೊಳಗಿನ ಬಿಸಲಹಳ್ಳಿ ವಿರುದ್ಧ ಜಯಿಸುವ ಮೂಲಕ ಬಾಲಕಿಯರು ವಿಭಾಗದ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಮೊದಲಾರ್ಧದಲ್ಲಿ ಕೇವಲ 01 ಅಂಕಗಳ (07-06) ಮುನ್ನಡೆ ಸಾಧಿಸಿದ್ದ ಆಂಜನೇಯ ಪ್ರೌಢಶಾಲೆಯ ಬಾಲಕಿಯರು ಅಂತಿಮವಾಗಿ ಪ್ರಶಸ್ತಿಗೆ ಭಾಜನರಾದರು. ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ರೇಷ್ಮಾ ಆಡಿನವರ ಬೆಸ್ಟ್ ಡಿಫೆಂಡರ್, ಗುಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಂದನಾ ಲಮಾಣಿ ಬೆಸ್ಟ ರೈಡರ್ ಹಾಗೂ ಆಂಜನೇಯ ಪ್ರೌಢಶಾಲೆಯ ಸಂಜನಾ ಗೂಳೇರ ಬೆಸ್ಟ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.