ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ಪಠಾಣ್‌ ಬೃಹತ್‌ ರೋಡ್‌ ಶೋ

KannadaprabhaNewsNetwork |  
Published : Oct 26, 2024, 01:08 AM IST
25ಎಚ್‌ವಿಆರ್‌7, 7ಎ | Kannada Prabha

ಸಾರಾಂಶ

ಶಿಗ್ಗಾಂವಿ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ ಶುಕ್ರವಾರ ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ ಶುಕ್ರವಾರ ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ ಬಳಿಕ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶ ನಡೆಸಿದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಪಕ್ಷದ ಬಾವುಟ ಹಿಡಿದು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕೇಂದ್ರದ ಬಿಜೆಪಿ ದುರಾಡಳಿತವನ್ನು ೧೧ ವರ್ಷದಿಂದ ನೋಡುತ್ತಿದ್ದೇವೆ. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಿರೋದು ಬಿಜೆಪಿಯವರು. ನಾವು ೧೩೬ ಸ್ಥಾನ ಗೆದ್ದಿದ್ದೇವೆ. ಶಿಗ್ಗಾಂವಿಯಲ್ಲೂ ಗೆಲ್ಲುತ್ತೇವೆ. ಬಿಜೆಪಿ-ಜೆಡಿಎಸ್ ಕುತಂತ್ರಕ್ಕೆ ಜನ ಉತ್ತರ ಕೊಡುತ್ತಾರೆ. ಉಪ ಚುನಾವಣೆಯಲ್ಲಿ ಮತ್ತೆ ನಮ್ಮ ಅಭ್ಯರ್ಥಿಗಳು ಪ್ರಚಂಡವಾಗಿ ಗೆಲ್ಲುತ್ತಾರೆ. ಗ್ಯಾರಂಟಿ ಬೇಡ ಎಂದು ಯಾರೂ ಹೇಳುತ್ತಿಲ್ಲ, ಆರ್ಥಿಕತೆ ಅಭಿವೃದ್ಧಿ ಆಗಿದೆ, ಜನ ಖುಷಿಯಲ್ಲಿ ಇದ್ದಾರೆ ಎಂದರು.ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷ ಮೈನಾರಿಟಿಗೆ ಟಿಕೆಟ್ ಕೊಟ್ಟು ಸರ್ವಧರ್ಮ ಸಮನ್ವಯತೆಯನ್ನು ಮೆರೆದಿದೆ. ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಬಿಜೆಪಿಯವರು ಮೋದಿಯವರ ಹೆಸರಲ್ಲಿ ಚುನಾವಣೆಯಲ್ಲಿ ಗೆದ್ದರು, ನಿಲ್ಲೋದಿಲ್ಲ, ನಿಲ್ಲೋದಿಲ್ಲ ಎಂದು ನಿಂತು ಏನಾದರು ಎಂದು ಎಲ್ಲರಿಗೂ ಗೊತ್ತಿದೆ, ಈಶ್ವರಪ್ಪನ ಮಗನಿಗೆ ಮೋಸ ಆಯಿತು, ಬಿಜೆಪಿಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಇದ್ದರು, ಬಿಜೆಪಿಯಲ್ಲಿದ್ದಾಗ ನಮ್ ಸೋಮಣ್ಣ ಬೇವಿನಮರದ ಒಬ್ಬ ಆಕಾಂಕ್ಷಿ ಆಗಿದ್ದರು, ಅದೇ ರೀತಿ ಈಗ ದುಂಡಿಗೌಡ್ರಗೆ ಟಿಕೆಟ್ ತಪ್ಪಿಸಿ ತಮ್ಮ ಮಗನಿಗೆ ಟಿಕೆಟ್ ತಂದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಆಗಿರಬಹುದು. ಆದರೆ ಮುಂಬರುವ ಚುನಾವಣೆಯಲ್ಲಿ ಖಾದ್ರಿ ಮತ್ತು ಸೋಮಣ್ಣನಿಗೆ ಅವಕಾಶ ಸಿಗಬಹುದು ಎಂದು ಭವಿಷ್ಯ ನುಡಿದರು.ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಖಾದ್ರಿ ಒಬ್ಬ ವ್ಯಕ್ತಿ ಅಷ್ಟೇ. ಪಕ್ಷ ಬಹಳ ದೊಡ್ಡದಿದೆ. ಚುನಾವಣೆ ಆದ ಮೇಲೆ ಎಲ್ಲವೂ ಗೊತ್ತಾಗುತ್ತದೆ, ನಾಲ್ಕು ಜನ ಚೀರಾಡಿದರೆ ಬಹಳ ದೊಡ್ಡ ಶಕ್ತಿ ಅಲ್ಲ, ಇಂಥಹ ಚುನಾವಣೆ ಬಹಳ ನೋಡಿದ್ದೇನೆ, ಇಲ್ಲಿ ಖಾದ್ರಿ ಪ್ರಶ್ನೆ ಬರಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಅಷ್ಟೇ. ಬಿಜೆಪಿಯಲ್ಲಿಯೂ ಜಗಳ ಇಲ್ಲವೇ..? ಅವರದು ಎಲ್ಲವೂ ಸರಿ ಇದೆಯಾ...? ಎಂದು ಪ್ರಶ್ನಿಸಿದರು.ಖಾದ್ರಿ ಬಂಡಾಯ ಪರಿಹಾರ ಮಾಡೋಕೆ ಪ್ರಯತ್ನ ಮಾಡುತ್ತೇವೆ. ಆಗಲಿಲ್ಲ ಅಂದರೆ ಏನು ಮಾಡೋಕೆ ಆಗುತ್ತೆ, ನಾನು ಚಡ್ಡಿ ಹಾಕೊಂಡು ಬಂದೇನಿ, ಕುಸ್ತಿ ಆಡುವವನೇ ಅಂದರೆ ನಾವೇನು ಮಾಡಲು ಆಗುತ್ತದೆ, ಗೋಡಾ ಹೈ, ಮೈದಾನ್ ಹೈ. ಎಷ್ಟು ಓಡ್ತಾರೆ ಓಡಲಿ, ಮನವೊಲಿಕೆ ಪ್ರಯತ್ನ ಮಾಡ್ತೀವಿ. ಖಾದ್ರಿಗೆ ಟಿಕೆಟ್ ಕೊಟ್ಟಿದ್ದರೆ, ಆಗ ಪಠಾಣ್ ಸೆಡ್ಡು ಹೊಡೆತಿದ್ದ. ಚನ್ನಪಟ್ಟಣ, ಸಂಡೂರು ಏನಾಯಿತು ಗೊತ್ತಲ್ಲವೇ, ತಿಳಿ ಆಗಲು ಸಮಯ ತಗೊಳುತ್ತೆ, ಸರಿ ಮಾಡೋ ಪ್ರಯತ್ನ ಮಾಡ್ತೀವಿ ಇಲ್ಲಾಂದ್ರೆ ಮೈದಾನ್ ಖಾಲಿ ಹೈ ಎಂದರು. ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಮಾತನಾಡಿ, ಹೈಕಮಾಂಡ್ ಅಳೆದುತೂಗಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ನಮ್ಮ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ, ಸಚಿವ ಜಮೀರ್ ಅಹ್ಮದ್, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಐ.ಜಿ.ಸನದಿ, ವಿನೋದ ಅಸೂಟಿ, ಸಿ.ಎಂ. ಪೈಜ್, ಪ್ರೇಮಾ ಪಾಟೀಲ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಮುಖಂಡರು, ಸಾವಿರಾರು ಕಾರ್ಯರ್ತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ