ಶಿಕಾರಿಪುರ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ: ರಾಘವೇಂದ್ರ

KannadaprabhaNewsNetwork | Published : Jan 19, 2024 1:48 AM

ಸಾರಾಂಶ

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಅನುಷ್ಠಾನಗೊಳಿಸಿದ ಶಾಶ್ವತ ನೀರಾವರಿ ಯೋಜನೆಗೆ ಈಗ ಪ್ರತಿಫಲ ದೊರೆ ಯುತ್ತಿದ್ದು, ಸುಸಜ್ಜಿತ ರಸ್ತೆ ಸಂಪರ್ಕ ಆಸ್ಪತ್ರೆಗಳ ಅಧುನೀಕರಣದಿಂದ ತಾಲೂಕು ಅಭಿವೃದ್ಧಿಯ ಉತ್ತುಂಗ ತಲುಪಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಯನ್ನು ದೊರಕಿಸುವ ಜತೆಗೆ ಹೊಸ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯವನ್ನು ಕಲ್ಪಿಸಿಕೊಡುವುದು ವಿಕಸಿತ ಸಂಕಲ್ಪ ಭಾರತ ಯಾತ್ರೆ ಪ್ರಮುಖ ಉದ್ದೇಶವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಪುರಸಭೆ ಹಾಗೂ ಬ್ಯಾಂಕ್ ಆಫ್ ಬರೋಡಾ ಶಿಕಾರಿಪುರ ಶಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ, ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಮಹದಾಸೆಯಿಂದ ನೇರವಾಗಿ ಮನೆಮನೆಗೆ ತಲುಪುವಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉಜ್ವಲ ಯೋಜನೆಯಡಿ ದೇಶದ ಕೋಟ್ಯಂತರ ಕುಟುಂಬಕ್ಕೆ ಉಚಿತ ಸಿಲಿಂಡರ್ ಸ್ಟೌ ನೀಡ ಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ₹5 ಲಕ್ಷವರೆಗಿನ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ 2 ಲಕ್ಷ ಅಧಿಕ ಫಲಾನುಭವಿಗಳ ಆರೋಗ್ಯ ರಕ್ಷಣೆ ಗಾಗಿ ಕೇಂದ್ರ ಸರ್ಕಾರ ₹180 ಕೋಟಿ ವ್ಯಯಿಸಲಾಗಿದೆ. ಮನೆಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಯೋಜನೆ ಅನುಷ್ಠಾನವಾಗಿದೆ ಎಂದು ತಿಳಿಸಿದರು.

ವಿ.ಪ. ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿದರು. ಪುರಸಭೆ ವತಿಯಿಂದ ಪಿಎಂ ಸ್ವನಿಧಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಮಾಹಿತಿ ನೀಡಲಾಯಿತು. ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಶಾಖೆ ವತಿಯಿಂದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ವತಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿವಮೊಗ್ಗದ ನೇಸರ ಕಲಾತಂಡದ ಕಲಾವಿದರು ಜಾಗೃತಿ ಗೀತೆಯನ್ನು ಹಾಡಿದರು. ಅಂಬಾರಗೊಪ್ಪ ಕಲಾವಿದರ ಡೊಳ್ಳು ಕುಣಿತ ಆಕರ್ಷಣೆಯಾಗಿತ್ತು.

ವೇದಿಕೆಯಲ್ಲಿ ಪುರಸಭಾ ಸದಸ್ಯ ಪಾಲಾಕ್ಷಪ್ಪ, ರಮೇಶ್, ಸುರೇಶ್, ರೂಪಕಲಾ ಹೆಗ್ಡೆ, ರೇಖಾಬಾಯಿ, ಶೈಲಾ ಮಡ್ಡಿ, ರೇಣುಕಸ್ವಾಮಿ, ಮಹಮ್ಮದ್ ಸಾಧಿಕ್, ಮುಖ್ಯಾಧಿಕಾರಿ ಭರತ್, ಆರೋಗ್ಯಾಧಿಕಾರಿ ರಾಜಕುಮಾರ್, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಅಧಿಕಾರಿ ಯೋಗೀಶ್, ಸ್ಥಳೀಯ ಶಾಖೆಯ ಸಂದೇಶ್‌ ಕುಮಾರ್, ಗುಡದಯ್ಯ, ಮುಖಂಡ ಬಸವರಾಜ ಮಿಲ್ಟ್ರಿ, ನೀಲಾಬಾಯಿ ಮತ್ತಿತರರು ಹಾಜರಿದ್ದರು.

Share this article