ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಇಚ್ಛಾಶಕ್ತಿಯ ಫಲವಾಗಿ ತಾಲೂಕು ಎಲ್ಲ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿ ರಾಜ್ಯದಲ್ಲಿಯೇ ಮಾದರಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ಶಿರಾಳಕೊಪ್ಪ ವೃತ್ತದ ಪ್ರವಾಸಿ ಮಂದಿರ ಸಮೀಪ ನಡೆದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಪಟ್ಟಣದ ವ್ಯಾಪ್ತಿ ಇದೀಗ ವಿಶಾಲವಾಗಿರುವುದರಿಂದ ಪ್ರತಿಯೊಂದು ಮನೆಗೂ ಸಮರ್ಪಕ ನೀರು ಸರಬರಾಜಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದ ಅವರು, ಈ ಬಡಾವಣೆಗಳ ಜನರ ಅನುಕೂಲಕ್ಕಾಗಿ ಐದು ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಅಂದಾಜು ಆರೂವರೆ ಕೀ.ಮೀ. ವ್ಯಾಪ್ತಿಯಲ್ಲಿನ ಮನೆಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಚ್ಛಾಶಕ್ತಿಯ ಫಲವಾಗಿ ತಾಲೂಕು ಎಲ್ಲ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿಯೇ ಮಾದರಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾದ ಯಡಿಯೂರಪ್ಪನವರ ಜತೆ ಹೆಚ್ಚಿನ ಕಾಳಜಿ ವಹಿಸಿದ ಸಂಸದ ರಾಘವೇಂದ್ರ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.ತಾಲೂಕಿನ ಜನತೆಗೆ ಸಕಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನತೆ ಬೇಸಿಗೆಯಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಂಜನಾಪುರ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಗುಣಮಟ್ಟದ ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕಾಗಿದೆ. ನಿರ್ಲಕ್ಷ್ಯ ವಹಿಸದೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ಸೇವೆಗೆ ಸದಾಕಾಲ ಸಿದ್ಧವಾಗಿರುವಂತೆ ತಿಳಿಸಿದ ಅವರು, ಜನತೆಯ ನೀರಿನ ದಾಹ ತೀರಿಸಲು ಅಮೃತ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಹೆಚ್ಚು ಶ್ರದ್ಧೆ ಆಸಕ್ತಿಯಿಂದ ನಿರ್ವಹಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯರಾದ ಜೀನಳ್ಳಿ ಪ್ರಶಾಂತ್, ರೂಪಾಕಲಾ ಹೆಗ್ಡೆ, ರೇಖಾಬಾಯಿ ಮಂಜುನಾಥ್ ಸಿಂಗ್, ಪಾಲಾಕ್ಷಪ್ಪ ಭದ್ರಾಪುರ, ಗೋಣಿ ಪ್ರಕಾಶ್, ಉಮಾವತಿ, ರೇಣುಕಸ್ವಾಮಿ, ರೋಷನ್, ಮುಖ್ಯಾಧಿಕಾರಿ ಭರತ್ ಮತ್ತಿತರರು ಉಪಸ್ಥಿತರಿದ್ದರು.