ಹುಬ್ಬಳ್ಳಿ: ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಪಿ. ಸಿಂಘ್ವಿ ಚಾರಿಟೇಬಲ್ ಟ್ರಸ್ಟ್‌ನಿಂದ ನೀಡಲಾಗುತ್ತಿರುವ “ಶಿಕ್ಷಾದೀಪ” ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ ಕೋರಿಮಠ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಶ್ರಮಿಕ ಭವನದಲ್ಲಿ ನಡೆದ ಬೆಂಗಳೂರಿನ ಪಿ. ಸಿಂಘ್ವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಸಹಯೋಗಲ್ಲಿ ನೀಡಲಾಗುತ್ತಿರುವ “ಶಿಕ್ಷಾದೀಪ” ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಈ ಶೈಕ್ಷಣಿಕ ಸಾಲಿನಲ್ಲಿ 548 ವಿದ್ಯಾರ್ಥಿಗಳಿಗೆ ₹51 ಲಕ್ಷ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. ಮುಂದಿನ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡುವ ಯೋಜನೆ ರೂಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಿ. ಸಿಂಘ್ವಿ ಚಾರಿಟೇಬಲ್ ಟ್ರಸ್ಟ್ ಸಾಮಾಜಿಕ ಕಾರ್ಯ ವಿಭಾಗದ ರಾಜ್ಯ ಸಂಯೋಜಕ ಈರಪ್ಪ ನಾಯ್ಕ ಮಾತನಾಡಿದರು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಪೋಷಕರೊಂದಿಗೆ ಉನ್ನತ ವಿದ್ಯಾಭ್ಯಾಸ, ಕೆರಿಯರ್ ರೂಪಿಸಿಕೊಳ್ಳುವುದರ ಕುರಿತು ಸಂವಾದ ನಡೆಯಿತು.ಕಾರ್ಯಕ್ರಮದಲ್ಲಿ ಹಮಾಲಿ ಕಾರ್ಮಿಕರ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಬಸವಣ್ಣೆಪ್ಪ ನೀರಲಗಿ, ಹನಮಂತ ಅಂಬಿಗೇರ, ನಾರಾಯಣ ಆರೇರ, ಅಂಗನವಾಡಿ ನೌಕರರ ಮುಖಂಡರಾದ ಸಾವಿತ್ರಿ ಬಿರಾದಾರ, ವಿದ್ಯಾರ್ಥಿಗಳಾದ ನೀಲಮ್ಮ ಬಿರಾದಾರ, ವಂದನಾ ಗುಡಿಹಾಳ, ಲಕ್ಷ್ಮೀ ಮುತ್ಯಾಳ, ಚಿರಂತ ಕಂಬಾಳಿಮಠ, ಕಾವೇರಿ ಗಡಿಗೆಣ್ಣವರ, ಇಲಿಯಾಜುದ್ದೀನ ಗಂಗಾವತಿ ಸೇರಿದಂತೆ ಹಲವರಿದ್ದರು.