ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರವು ಉತ್ತರ ಕರ್ನಾಟಕದ ಸಂಪರ್ಕ ನಗರವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹೆಬ್ಬಾಗಿಲಾಗಿ ಪರಿವರ್ತನೆಯಾಗಲಿದೆ. ನಗರವನ್ನು ಸುಂದರವಾಗಿ ನಿರ್ಮಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಬದ್ಧನಾಗಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದಲ್ಲಿ ಸೋಮವಾರ ಶಿರಾ ನಗರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಪಿ.ಆರ್.ಮಂಜುನಾಥ್ ಹಾಗೂ ಸದಸ್ಯರಿಗೆ ಶುಭ ಕೋರಿ ಮಾತನಾಡಿದರು. ಶಿರಾ ನಗರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ೨೦೩೦ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ೨೦೫೦ಕ್ಕೆ ೪ ಕೋಟಿ ಜನಸಂಖ್ಯೆ ಮೀರಲಿದೆ ಎಂದು ತ್ಯಾಗರಾಜನ್ ಸಮಿತಿ ಅವರು ವರದಿ ಕೊಟ್ಟಿದ್ದಾರೆ. ಪ್ರಸ್ತುತ ೧.೫೦ ಕೋಟಿ ಜನಸಂಖ್ಯೆ ಇದ್ದು, ಕರ್ನಾಟಕದ ಶೇ. ೨೫ ರಷ್ಟು ಜನಸಂಖ್ಯೆ ಇದೆ. ಬೆಂಗಳೂರು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಏಷ್ಯಾ ಖಂಡದಲ್ಲೇ ಪ್ರಮುಖವಾದ ಪ್ರದೇಶವಾಗಿದೆ. ಆದ್ದರಿಂದ ಮುಂದೊಂದು ದಿನ ಬೆಂಗಳೂರನ್ನು ಹೊರತುಪಡಿಸಿ ಶಿರಾ ನಗರವೂ ಬೆಂಗಳೂರಿನ ಹೆಬ್ಬಾಗಲಾಗಲಿದೆ ಎಂದರು.ಶಿರಾದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ಇದಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಭಾಗದ ಶಾಸಕರೆಲ್ಲರೂ ಸೇರಿ ಸರಕಾರಕ್ಕೆ ಒಂದು ಮನವಿಯನ್ನು ನೀಡಲಿದ್ದೇವೆ. ಸರಕಾರದ ಮೇಲೆ ಒತ್ತಡ ತರುತ್ತೇವೆ. ನಾವೂ ಜನಪ್ರತಿನಿಧಿಗಳೇ ನಮಗೂ ಕೇಳುವ ಹಕ್ಕಿದೆ. ಉತ್ತರ ಕರ್ನಾಟಕದ ಭಾಗವನ್ನು ಸಂಪರ್ಕಿಸಿವುದು ಶಿರಾ. ಇಲ್ಲಿ ಬೆಳೆದ ತರಕಾರಿಯೂ ಸಹ ಅಮೇರಿಕಾಕಕ್ಕೆ ಹೋಗುತ್ತದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಆದರೆ ರೈತರಿಗೂ ಅನುಕೂಲವಾಗುತ್ತದೆ. ಎಂತಹದ್ದೇ ಸಂದರ್ಭ ಬಂದರೂ ವಿರ್ಮಾನ ನಿಲ್ದಾಣ ತರುವ ಕೆಲಸ ಮಾಡುತ್ತೇನೆ. ೨೦೩೩ಕ್ಕೆ ವಿಮಾನ ನಿಲ್ದಾಣ ಆಗಬೇಕು ಎಂದರು. ಯಾವುದೇ ಸಂದರ್ಭದಲ್ಲಿ ಕಾನೂನು ಬಹಿರ ಚಟುವಟಿಕೆ ನಡೆಯಬಾರದು. ೧೭೬೦ ಎಕರೆ ಬೋಗಸ್ ಜಮೀನು ಇದೆ. ಅದನ್ನು ಪಡೆಯಲು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದೇನೆ. ಯಾರಿಗೂ ಜಮೀನು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದ ಅವರು ಕಾನೂನು ಬಾಹಿರ ಚಟುವಟಿಕೆ ನಡೆಸುವವರನ್ನು ಜೈಲಿಗೆ ಹಾಕಲು ಶಿರಾ ಭಾಗದಲ್ಲಿ ಒಂದು ಕಾರಾಗೃಹ ತೆರೆಯಲು ಯೋಜಿಸಿದ್ದೇನೆ ಎಂದರು.