ಶಿರಹಟ್ಟಿ:ಲಕ್ಷ್ಮೇಶ್ವರದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಲಕ್ಷ್ಮೇಶ್ವರ ಎಂಬವರ ಸೇವಾ ಪುಸ್ತಕವನ್ನು ಬೆಂಗಳೂರಿನ ಮಹಾಲೇಖಪಾಲಕರ ಕಚೇರಿಗೆ ಕಳುಹಿಸಲು ₹೪ ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಗುಮಾಸ್ತೆಯೊಬ್ಬರು ಶುಕ್ರವಾರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಶಿರಹಟ್ಟಿಯ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಗುಮಾಸ್ತೆ ಎಸ್.ಎಸ್. ಚೌತಾಯಿ ಲಂಚದ ಹಣ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪನವರ ಎಎಸ್ಪಿ ವಿಜಯ ಬಿರಾದಾರ, ಸಿಪಿಐ ಎಸ್.ಎಸ್. ತೇಲಿ ದಾಳಿ ನಡೆಸಿ, ವಶಕ್ಕೆ ಪಡೆದರು.ದಾಳಿ ವೇಳೆ ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ಎಂ.ಎಸ್. ಗಾರ್ಗಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ, ಟಿ.ಎನ್. ಜವಳಿ, ಎಮ್.ಬಿ. ಬಾರಡ್ಡಿ, ಎಮ್.ಎಸ್. ದಿಡಗೂರ, ಪಿ.ಎಲ್. ಪಿರಿಮಾಳ, ಎಸ್.ವಿ. ಸೈನಾಪೂರ, ಎಮ್.ಐ. ಹಿರೇಮಠ, ಐ.ಎಸ್. ಸೈಪಣ್ಣವರ ದಾಳಿ ವೇಳೆ ಇದ್ದರು. ಕರ್ನಾಟಕ ಲೋಕಾಯುಕ್ತ ಗದಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಎಚ್ಚರಿಕೆ ನೀಡಿದರೂ ಕಲಿಯದ ಪಾಠ: ಸೆ.೧೦ರಂದು ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಗದಗ ಜಿಲ್ಲೆಯಿಂದ ಏರ್ಪಡಿಸಿದ್ದ ಶಿರಹಟ್ಟಿ ತಾಲೂಕು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ಧಲಿಂಗಪ್ಪ ಇವರ ಸಮ್ಮುಖದಲ್ಲಿ ಸಭೆ ಜರುಗಿದ್ದು, ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸುವುದು ಸೂಕ್ತ ವ್ಯವಸ್ಥೆಯಲ್ಲ. ಜನರ ಕೆಲಸ ಕಾನೂನಾತ್ಮಕವಾಗಿದ್ದರೆ ಅಲೆದಾಡಿಸುವುದು ಮಾಡಬೇಡಿ. ಸಾರ್ವಜನಿಕರನ್ನು ಸತಾಯಿಸಿದರೆ ಲಂಚಕ್ಕೆ ಬೇಡಿಕೆ ಇಟ್ಟಂತೆ ಎಂದು ಎಚ್ಚರಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸುದೀರ್ಘ ಎರಡು ತಾಸು ಸಭೆ ನಡೆಸಿ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ಮತ್ತು ತಿಳಿವಳಿಕೆ ಮೂಡಿಸಿದ್ದರೂ ಇದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.