ಶಿರೂರು ಪರ್ಯಾಯದ ಕೀರ್ತಿ ಇನ್ನಷ್ಟು ವ್ಯಾಪಿಸಲಿ ಎಂದು ನಿರ್ಗಮನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾರೈಸಿದ್ದಾರೆ.
ಉಡುಪಿ: ಶಿರೂರು ಪರ್ಯಾಯ ಎಂದರೇ ಅದು ಅನ್ನವಿಠಲನ ಪರ್ಯಾಯ ಎಂದೇ ಖ್ಯಾತಿ ಪಡೆದಿದೆ, ಹಿಂದಿನ ಶ್ರೀ ಲಕ್ಷ್ಮೀವರ ತೀರ್ಥರು ತಮ್ಮ ಪರ್ಯಾಯದ ಸಂದರ್ಭದಲ್ಲಿ ನಡೆಸಿದ ಅನ್ನದಾನದ ಕೀರ್ತಿ ಬಹಳ ವ್ಯಾಪಿಸಿತ್ತು. ಈಗ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಪರ್ಯಾಯಾವಧಿಯಲ್ಲಿ ಅನ್ನದಾನದ ಜೊತೆಗೆ ಜ್ಞಾನದಾನಕ್ಕೂ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪರ್ಯಾಯದ ಕೀರ್ತಿ ಇನ್ನಷ್ಟು ವ್ಯಾಪಿಸಲಿ ಎಂದು ನಿರ್ಗಮನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾರೈಸಿದ್ದಾರೆ.ಅವರು ಕೃಷ್ಣಮಠದಲ್ಲಿ ಶಿರೂರು ಶ್ರೀಗಳಿಗೆ ಕೃಷ್ಣ ಪೂಜೆಯ ಪರ್ಯಾಯಾಧಿಕಾರವನ್ನು ಹಸ್ತಾಂತರಿಸಿ ಸಂದೇಶ ನೀಡಿದರು.
ಶಿರೂರು ಮಠದ ಪಟ್ಟದ ದೇವರು ವಾಮನ ವಿಠ್ಠಲ, ತಮ್ಮ ಪುತ್ತಿಗೆ ಮಠದ ಪಟ್ಟದ ದೇವರು ಉಪೇಂದ್ರ ವಿಠ್ಠಲ, ಆದ್ದರಿಂದ ಇದು ವಿಠ್ಠಲರಿಂದ ವಿಠ್ಠಲರಿಗೆ ಹಸ್ತಾಂತರವಾಗುತ್ತಿರುವ ಪರ್ಯಾಯವಾಗಿದೆ ಎಂದ ಶ್ರೀಗಳು, ವಾಮನ ವಿಠ್ಠಲನ ಈ ಪರ್ಯಾಯದಿಂದ ಲೋಕದಲ್ಲಿ ಶಾಂತಿ, ಸುಭಿಕ್ಷೆ ಹೆಚ್ಚಲಿ ಎಂದರು.ಈ ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾದ ಮೈಸೂರು ಮಹರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಅಭಿನಂದಿಸಿದ ಪುತ್ತಿಗೆ ಶ್ರೀಗಳು, ಉಡುಪಿ ಕೃಷ್ಣಕ್ಷೇತ್ರಕ್ಕೆ ಮೈಸೂರು ಒಡೆಯರು ನೀಡಿದ ಗೌರವ, ಕೊಡುಗೆಗಳನ್ನು ಸ್ಮರಿಸಿದರು.
ಪುತ್ತಿಗೆ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥರು, ಶಿರೂರು ಮಠದ ದಿವಾಣರಾದ ಉದಯಕುಮಾರ್ ಸರಳತ್ತಾಯರು ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.