ಶಿರೂರು ದುರಂತ: ಗಂಗಾವಳಿ ನದಿಯಲ್ಲಿ ಮಣ್ಣಿನ ರಾಶಿಯ ಅಡಿಯಲ್ಲಿ ಮೃತದೇಹ ಪತ್ತೆಗೆ ಕಾರ್ಯಾಚರಣೆ

KannadaprabhaNewsNetwork | Updated : Jul 23 2024, 12:52 PM IST

ಸಾರಾಂಶ

ಕಾರ್ಯಾಚರಣೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಸ್ರೋದಿಂದ ಗುಡ್ಡ ಕುಸಿತ ಪ್ರದೇಶದ ಛಾಯಾಚಿತ್ರವನ್ನೂ ತರಿಸಿಕೊಳ್ಳಲಾಗಿದೆ. ಸೇನಾಪಡೆ ತಂಡ ಜಿಪಿಆರ್ ಮೂಲಕ ಹುಡುಕಾಟ ನಡೆಸುತ್ತಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಶಿರೂರು ಹೆದ್ದಾರಿ ಅಥವಾ ಹೆದ್ದಾರಿ ಪಕ್ಕದ ಮಣ್ಣಿನ ರಾಶಿಯಡಿ ಯಾರೂ ಇರುವ ಸಾಧ್ಯತೆ ಇಲ್ಲ ಎಂದು ಕಾರ್ಯಾಚರಣೆಯಲ್ಲಿ ಖಚಿತಗೊಂಡಿದ್ದು, ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣಿನ ರಾಶಿಯ ಅಡಿಯಲ್ಲಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ಶುರುವಾಗಿದೆ.

ಕಾರ್ಯಾಚರಣೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಸ್ರೋದಿಂದ ಗುಡ್ಡ ಕುಸಿತ ಪ್ರದೇಶದ ಛಾಯಾಚಿತ್ರವನ್ನೂ ತರಿಸಿಕೊಳ್ಳಲಾಗಿದೆ. ಸೇನಾಪಡೆ ತಂಡ ಜಿಪಿಆರ್ ಮೂಲಕ ಹುಡುಕಾಟ ನಡೆಸುತ್ತಿದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ 7 ದಿನಗಳಿಂದ ಪತ್ತೆ ಕಾರ್ಯಾಚರಣೆ ನಡೆಸುತ್ತಿದೆ.

ಇಷ್ಟು ದಿನಗಳ ಕಾರ್ಯಾಚರಣೆಯಲ್ಲಿ ಹೆದ್ದಾರಿ ಮೇಲೆ, ಅಕ್ಕಪಕ್ಕ ಬಿದ್ದಿರುವ ಕಲ್ಲು ಮಣ್ಣುಗಳ ರಾಶಿಯಲ್ಲಿ ಮೂವರು ಸಿಲುಕಿರಬಹುದು. ಅದರಲ್ಲೂ ಕೇರಳದ ಲಾರಿಯಲ್ಲಿ ಇದ್ದ ಚಾಲಕ ಅರ್ಜುನ್ ಬದುಕಿರುವ ಸಾಧ್ಯತೆ ಇದೆ ಎಂದು ಆತನ ಕುಟುಂಬದವರು ಆಶಾಭಾವನೆ ಹೊಂದಿದ್ದರು. ಹಾಗಾಗಿ ಹೆದ್ದಾರಿ, ಹೆದ್ದಾರಿ ಪಕ್ಕದಲ್ಲಿ ಮಣ್ಣಿನ ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು.

ಈ ಶೋಧ ಕಾರ್ಯ ಮುಗಿದಿದ್ದು, ಯಾರೂ ಜೀವಂತವಾಗಿ ಅಥವಾ ಮೃತಪಟ್ಟ ಸ್ಥಿತಿಯಲ್ಲಿ ಇಲ್ಲ ಎಂದು ಖಚಿತವಾಗಿದೆ. ಈಗ ಗಂಗಾವಳಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಶೇಖರಣೆಯಾಗಿರುವ ಮಣ್ಣಿನ ಅಡಿಯಲ್ಲಿ ಈ ಮೂವರೂ ಇರುವ ಸಾಧ್ಯತೆ ಇದೆ. ಆದರೆ ಇಲ್ಲಿ ಮಣ್ಣಿನಡಿ ಇದ್ದಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ. ಅವರ ಮೃತದೇಹವನ್ನಷ್ಟೇ ಪತ್ತೆ ಹಚ್ಚಬಹುದು ಎನ್ನುವುದು ಕಾರ್ಯಾಚರಣೆಯಲ್ಲಿ ತೊಡಗಿರುವವರ ಅಭಿಪ್ರಾಯವಾಗಿದೆ.

ಭಾನುವಾರ ಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಣ್ಮರೆಯಾದವರನ್ನು ಜೀವಂತವಾಗಿ ಆಗಲಿ ಅಥವಾ ಅವರ ಮೃತದೇಹವನ್ನಾಗಲಿ ಭೂಮಿ ಹಾಗೂ ನೀರಿನಲ್ಲಿ ಇದ್ದರೂ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದರು.

ಶೋಧ ಕಾರ್ಯ: ಹೆದ್ದಾರಿ ಅಥವಾ ಹೆದ್ದಾರಿ ಪಕ್ಕದ ಮಣ್ಣಿನ ರಾಶಿಯಲ್ಲಿ ಯಾರೂ ಸಿಲುಕಿಲ್ಲ ಎನ್ನುವುದು ಕಾರ್ಯಾಚರಣೆಯಿಂದ ಗೊತ್ತಾಗಿದೆ. ಹಾಗಾಗಿ ನದಿ ನೀರಿನಲ್ಲಿ ಸಂಗ್ರಹವಾದ ಮಣ್ಣಿನ ಅಡಿಯಲ್ಲಿ ಶೋಧ ಕಾರ್ಯ ಶುರುವಾಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

Share this article