ಹಾವೇರಿ: ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ, ಶರೀಫಗಿರಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಸುಮಾ ಪುರದ ಮಾತನಾಡಿ, ಹಲವಾರು ದಶಕಗಳಿಂದ ಈ ಭಾಗದ ಸಾರ್ವಜನಿಕರು ಕನ್ನಡಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಪ್ರಾಧಿಕಾರ ರಚನೆಗಾಗಿ ಹೋರಾಟ ಮಾಡುತ್ತ ಬಂದಿದ್ದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಶರೀಫಗಿರಿ ಅಭಿವೃದ್ಧಿಗಾಗಿ ಈ ಹಿಂದಿನ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ಪ್ರಾಧಿಕಾರ ರಚನೆ ಸಾಧ್ಯವಾಗಿಲ್ಲ. ಕಾರಣ ಮುಂಬರುವ ಬಜೆಟ್‌ನಲ್ಲಿ ಪ್ರಾಧಿಕಾರ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಎಂ.ಕೆ. ತಿಮ್ಮಾಪುರ, ಪ್ರೇಮಾ ಮುದಿಗೌಡ್ರ, ಮಂಜುನಾಥ ಕೋಲಕಾರ, ಬಸವಣ್ಣಯ್ಯ ಬಸಾಪುರಮಠ, ಪ್ರವೀಣ ಕಾಗದ, ಶರಣಪ್ಪ ಶಾಂತಗಿರಿ, ಉಮೇಶ ಮುದಿಗೌಡ್ರ, ಸುರೇಶ ವನಹಳ್ಳಿ, ಮಂಜುನಾಥ ದಾನಪ್ಪನವರ ಸೇರಿದಂತೆ ಅನೇಕ ಮುಖಂಡರು ಇದ್ದರು.