ಕನ್ನಡಪ್ರಭ ವಾರ್ತೆ ಗುರುಮಠಕಲ್
ಮಾತೆ ಜೀಜಾಬಾಯಿಯವರ ಮನೋಭಾವಗಳ, ಚಿಂತನೆಗಳ ಜೀವಂತ ಮೂರ್ತರೂಪವಾಗಿ ಶಿವಬಾ ಜನಿಸಿದ್ದರು. ತಾಯಿ ಕಂಡಿದ್ದ ಹಿಂದವೀ ಸ್ವರಾಜ್ಯದ ಕನಸನ್ನು ಸಾಕಾರ ಮಾಡುವ ಮೂಲಕ ಛತ್ರಪತಿಯಾದರು ಎಂದು ಉತ್ತರ ಕರ್ನಾಟಕ ಧರ್ಮ ಜಾಗರಣ ಸಂಚಾಲಕ ಸ್ವತಂತ್ರ ಸಿಂಧೆ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹತ್ತಿರದ ಮೈದಾನದಲ್ಲಿ ಹಿಂದೂ ಯುವ ಘರ್ಜನೆ ವೇದಿಕೆ ವತಿಯಿಂದ ಆಯೋಜಿಸಿದ್ದ, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದ ಅವರು, ಇಸ್ಲಾಂ ರಾಜರ ಆಡಳಿತದಲ್ಲಿ ನಲುಗುತ್ತಿದ್ದ ಹಿಂದೂ ಸಮಾಜವನ್ನು ಮೇಲೆತ್ತುವ ಹಾಗೂ ಹಿಂದವೀ ಸ್ವರಾಜ್ಯ ಕಟ್ಟುವ ಮಗ ಹುಟ್ಟಬೇಕೆನ್ನುವ ಹರಕೆ ತಾಯಿ ಜೀಜಾಬಾಯಿಯದಾಗಿತ್ತು ಎಂದರು.
ತಾಯಿಯ ಕನಸು, ಗುರು ದಾದಾಜಿ ಕೊಂಡದೇವ ಹಾಗೂ ಸಮರ್ಥ ರಾಮದಾಸರ ಮಾರ್ಗದರ್ಶನದಲ್ಲಿ ಬೆಳೆದ ಶಿವಬಾ ಅವರು ಚಿಕ್ಕಂದಿನಲ್ಲೇ ಮಾವಳಿಗ ಬಾಲಕರ ಸೈನ್ಯವನ್ನು ಕಟ್ಟುವ ಮೂಲಕ ನಾಯಕತ್ವವನ್ನು ತೋರುತ್ತಾ ಬೆಳೆದರು. ತೋರಣಗಡದ ಕೋಟೆಯನ್ನು ಗೆಲ್ಲುತ್ತಾ, ತಾಯಿ ಕನಸಿನ ಹಿಂದವೀ ಸ್ವರಾಜ್ಯ ನಿರ್ಮಾಣಕ್ಕೆ ಅಡಿಪಾಯ ಹಾಕಿದ ನಂತರ ಆದಿಲ್ ಶಾಹಿ ವಶದಲ್ಲಿದ್ದ ಒಂದೊಂದೆ ಕೋಟೆಗಳನ್ನು ಗೆದ್ದದ್ದು ರೋಚಕ ಇತಿಹಾಸ ಎಂದರು.ಎಷ್ಟೇ ಅಡ್ಡಿಗಳು ಬಂದರೂ ಸಹ ಎದೆಗುಂದದ ಶಿವಬಾ ತಲೆಯಲ್ಲಿ ಕೇವಲ ಹಿಂದವೀ ಸಾಮ್ರಾಜ್ಯ ಭವಿಷ್ಯತ್ತಿನ ಭದ್ರತೆಯ ಚಿಂತನೆ ಮಾತ್ರ. ಅಪ್ರತಿಮ ಶೌರ್ಯ ಮಾತ್ರವಲ್ಲದೇ ಶಿವಬಾರಲ್ಲಿ ಮಾತೃತ್ವದ ಮಮತೆಯೂ ತುಂಬಿತ್ತು. ತಾನಾಜಿ ಮನ್ಸುರೇ ಅವರ ಅಗಲಿಕೆಗೆ ಕಣ್ಣೀರು ಸುರಿಸಿದ ಶಿವಾಜಿ, ಮಗುವಿನಂತೆ ಅತ್ತಿದ್ದು ಅವರಲ್ಲಿನ ಅಂತಃಕರಣದ ಪ್ರತೀಕವಾಗಿದೆ ಎಂದರು.
ಹಿಂದಿನ ಸರಕಾರಗಳು ತುಷ್ಟೀಕರಣದ ಕಾರಣ ಇಸ್ರೇಲ್ ನಂತಹ ಭಾರತ ಪರ ದೇಶವನ್ನು ದೂರವಿಟ್ಟಿದ್ದವು. ಆದರೆ, ಮೋದಿ ಅವರ ನೇತೃತ್ವದಲ್ಲಿ ಈಗ ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಿದರ ಜತೆಗೆ ಇಂದು ಜಗತ್ತೇ ಭಾರತದತ್ತ ಆದ್ಯತೆಯ ದೃಷ್ಟಿಯನ್ನು ತೋರುತ್ತಿದ್ದಾರೆ ಎಂದರು.ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಗಂಗಾಪರಮೇಶ್ವರಿ ವೃತ್ತ ಹಾಗೂ ಅಂಬಿಗರ ಚೌಡಯ್ಯ ವೃತ್ತದ ಮೂಲಕ ಛತ್ರಪತಿ ಶಿವಾಜಿ ಜಯಂತ್ಯುತ್ಸವದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಯುವ ಸಮುದಾಯ ಕುಣಿದು, ಕುಪ್ಪಳಿಸಿ ಯಾತ್ರೆಯನ್ನು ಆಕರ್ಷಕಗೊಳಿಸಿತು.
ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವೈದ್ಯಾಧಿಕಾರಿ ಡಾ.ವಿ.ಸಿ. ಮೈತ್ರಿ, ರಮೇಶ ಹೂಗಾರ, ವೆಂಕಟೇಶ ತೊಲಮಾಮಿಡಿ ಸೇರಿದಂತೆ ಹಿಂದೂ ಯುವ ಘರ್ಜನೆ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗಣ್ಯರು ಇದ್ದರು.