ಎಲ್ಲಾ ಧರ್ಮದ ಉಳಿವಿಗಾಗಿ ಹೋರಾಡಿದ್ದ ಶಿವಾಜಿ

KannadaprabhaNewsNetwork | Published : Mar 16, 2025 1:48 AM

ಸಾರಾಂಶ

ಶಿವಮೊಗ್ಗ: ಎಲ್ಲಾ ಸಮಾಜಗಳು ಇಂದು ಒಗ್ಗಟ್ಟಾಗಿದ್ದು, ಅದೇ ರೀತಿಯಲ್ಲಿ ಮರಾಠರು ಕೂಡ ಪಕ್ಷಭೇದ ಬಿಟ್ಟು ಒಗ್ಗಟ್ಟಾಗಿ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದು ಸಚಿವ ಸಂತೋಷ್‌ ಲಾಡ್ ಹೇಳಿದರು.

ಶಿವಮೊಗ್ಗ: ಎಲ್ಲಾ ಸಮಾಜಗಳು ಇಂದು ಒಗ್ಗಟ್ಟಾಗಿದ್ದು, ಅದೇ ರೀತಿಯಲ್ಲಿ ಮರಾಠರು ಕೂಡ ಪಕ್ಷಭೇದ ಬಿಟ್ಟು ಒಗ್ಗಟ್ಟಾಗಿ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದು ಸಚಿವ ಸಂತೋಷ್‌ ಲಾಡ್ ಹೇಳಿದರು.

ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘ ವತಿಯಿಂದ ಶನಿವಾರ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಮರಾಠ ಸಮಾಜದ ವೆಬ್‌ಸೈಟ್‌ ಅನಾವರಣ ಮಾಡಿ ಅವರು ಮಾತನಾಡಿದರು.

ಪಕ್ಷದ ಹೆಸರಿನಲ್ಲಿ ಕಚ್ಚಾಡಿಕೊಂಡಿದ್ದರೆ ಸಂಘಟನೆ ಸಾಧ್ಯವಿಲ್ಲ. ಸಮಾಜದ ವಿಚಾರ ಬಂದಾಗ ಪಕ್ಷಭೇದ ಮರೆತು ಒಂದಾಗಬೇಕಿದೆ. ರಾಜಕಾರಣ ಮಾಡಲು ಬೇರೆ ವೇದಿಕೆ ಇದೆ. ನನಗೆ ಈಗಲೂ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ. ಹೆಂಡ್ತಿ ಈಗಲೂ ಹೇಳ್ತಾಳೆ ರಾಜಕೀಯ ಬಿಟ್ಟುಬಿಡಿ ಎಂದು, ಆದರೆ ರಾಜಕೀಯ ನನಗೆ ಚಟವಾಗಿದೆ. 17ನೇ ವಯಸ್ಸಿನಿಂದ ರಾಜಕಾರಣ ಮಾಡುತ್ತಿದ್ದೇನೆ. ಆದರೆ, ಸಮಾಜಕ್ಕೆ ಒಳ್ಳೆಯದು ಮಾಡುವುದು ಪ್ರಥಮ ಆದ್ಯತೆ ಎಂದರು.

ಮರಾಠ ಸಮಾಜ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ, ಮೊಘಲರನ್ನು ಸೋಲಿಸುವ ಸಂದರ್ಭದಲ್ಲಿ ಶಿವಾಜಿ ಸೇನೆಯಲ್ಲಿ ಮುಸ್ಲಿಮರ ಒಂದು ಪಡೆಯೇ ಇತ್ತು. ಖಾಜಿ ಹೈದರ್ ಶಿವಾಜಿಯ ವಕೀಲರಾಗಿದ್ದ. ರುಸ್ತುಮ್ ಎ ಜಮಾಲ್ ಶಿವಾಜಿಗೆ ನಿರಂತರ ಸಹಾಯ ಮಾಡುತ್ತಿದ್ದ. ಶಿವಾಜಿ ಒಂದು ಧರ್ಮದ ವಿರುದ್ಧ ಹೋರಾಟ ಮಾಡಲಿಲ್ಲ, ಎಲ್ಲಾ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದವರು. ಇತಿಹಾಸ ತಿಳಿಯದೆ ಮಾತನಾಡುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಹೀಗಾಗಿ ಶಿವಾಜಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಇಂದು ಶ್ರೀಮಂತರಿಗೆ ಜಾತಿ ಇಲ್ಲ. ಆದರೆ ಬಡವರು ಮಧ್ಯಮ ವರ್ಗದವರಲ್ಲಿ ಜಾತಿ ವಿಷ ಬೀಜ ಬಿತ್ತಲಾಗಿದೆ. ಸಮಪಾಲು, ಸಮಬಾಳು ಸಿಕ್ಕದಿದ್ದರೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಹಿಂದೂ ಸ್ವರಾಜ್, ಹಿಂದೂ ಸಂಘಟನೆ ಎನ್ನುವ ಯಾರೂ ಮನೆಯಲ್ಲಿ ಶಿವಾಜಿ ಫೋಟೋ ಹಾಕಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದವರು ಶಾಹು ಮಹಾರಾಜ್, ಸಂವಿಧಾನ ಬರೆದ ಬಾಬಾಸಾಹೇಬ್ ಅಂಬೇಡ್ಕರ್ ಮರಾಠರು. ಆದರೆ ಈಗ ನಮ್ಮ ಸಮಾಜವೇ 2 ಎ ಮೀಸಲಾತಿ ಕೇಳಬೇಕಾದ ಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಶೇ.69 ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲೂ ಶೇ.75 ರಷ್ಟು ಮೀಸಲಾತಿ ತರುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸನಾತನ ಹಿಂದೂ ಧರ್ಮವನ್ನು ಉಳಿಸುವಲ್ಲಿ ಮರಾಠ ಸಮಾಜದ ಕೊಡುಗೆ ಅಪಾರವಾಗಿದೆ. ಮರಾಠ ಸಮಾಜವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ಮುಖ್ಯವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು ಎಂದರು.

ವಿಧಾನಪರಿಷತ್ ಸದಸ್ಯ ಎಂ.ಜಿ.ಮೂಳೆ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಗೋಸಾಯಿ ಮಠದ ಶ್ರೀಮಂಜುನಾಥ ಭಾರತೀ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಚಿನ್ ಶಿವಾಜಿರಾವ್ ಸಿಂಧ್ಯಾ ವಹಿಸಿದ್ದರು.ಇದೇ ವೇಳೆ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ಶಾಸಕ ಬೇಳೂರು ಗೋಪಾಲಕೃಷ್ಣ, ವಿಪ ಸದಸ್ಯ ಡಾ.ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಸಾಮಾಜದ ಗೌರವಾಧ್ಯಕ್ಷ ಎಂ.ಪ್ರವೀಣ್‌ಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸಮಾಜದ ಮುಖಂಡರಾದ ದೇವರಾಜ್ ಸಿಂಧ್ಯಾ, ಗೀತಾ ಸತೀಶ್, ಶಿವಾಜಿರಾವ್, ಪ್ರಕಾಶ್ ಭಾಗೋಜಿ ಮತ್ತಿತರರಿದದರು.

ಕವಿತಾರಾವ್ ಸ್ವಾಗತಿಸಿದರು. ದೇವರಾಜ್ ಸಿಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಲಾಡ್‌ ಸಿಎಂ ಆಗಬೇಕು ಎಂಬುವುದು

ನನ್ನ ಆಸೆ: ಸಂಸದ ಬಿವೈಆರ್‌

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಸಂತೋಷ್ ಲಾಡ್ ಅವರು ಮರಾಠ ಸಮಾಜದ ವೆಬ್‌ಸೈಟ್ ಬಿಡುಗಡೆ ಸಂದರ್ಭದಲ್ಲಿ ಪರಸ್ಪರ ಹೊಗಳಿದ ಘಟನೆ ನಡೆಯಿತು.

ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಭಾಷಣದಲ್ಲಿ ಸಂತೋಷ್ ಲಾಡ್ ಅವರು ಗೌರವದ ನಡೆಯ ವ್ಯಕ್ತಿಯಾಗಿದ್ದಾರೆ. ಎಲ್ಲಾ ಪಕ್ಷದವರ ಪ್ರೀತಿ ಗಳಿಸಿದ್ದಾರೆ. ಮುಖ್ಯಮಂತ್ರಿ ತೂಕದಲ್ಲಿ ಇದ್ದಾರೆ. ಅವರು ಕೇವಲ ರಾಜಕಾರಣಿಯಲ್ಲ. ಸಮಾಜ ಚಿಂತಕರು ಹಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಬೇಕು ಎಂಬುವುದು ನನ್ನ ಆಸೆ ಕೂಡ ಎಂದರು.

ಇತ್ತ ಸಂತೋಷ್ ಲಾಡ್ ಅವರು ಕೂಡ ಬಿ.ವೈ.ರಾಘವೇಂದ್ರ ಅವರ ಕುರಿತು ಅವರು ಬಂಗಾರದ ಮನುಷ್ಯ, ಅಭಿವೃದ್ಧಿಯ ಹರಿಕಾರ, ಗುಣಕ್ಕೆ ಯಾವಾಗಲೂ ಮತ್ಸರ ಇರುವುದಿಲ್ಲ ಎಂದರು.

Share this article