ಶಿವಾಜಿ ಆದರ್ಶದ ದೇಶಸೇವೆ: ಅಣ್ಣಾಮಲೈ ಕರೆ

KannadaprabhaNewsNetwork | Published : Feb 26, 2025 1:02 AM

ಸಾರಾಂಶ

ಕಲ್ಲಡ್ಕಶ್ರೀರಾಮ ವಿದ್ಯಾಕೇಂದ್ರ, ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ವತಿಯಿಂದ ಶ್ರೀರಾಮ ಪದವಿ ಕಾಲೇಜಿನ ಆಜಾದ್ ಭವನದಲ್ಲಿ ಮಂಗಳವಾರ ನಡೆದ ‘ಪ್ರಚಲಿತ ಭಾರತ: ಸತ್ಯ-ಮಿಥ್ಯೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೆ. ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಯುವಜನತೆ ಶಿವಾಜಿ ಮಹಾರಾಜರಂತಹ ಶ್ರೇಷ್ಠ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಸೇವೆ ಮಾಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ನಿವೃತ್ತ ಪೊಲೀಸ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೆ. ಹೇಳಿದ್ದಾರೆ.

ಕಲ್ಲಡ್ಕಶ್ರೀರಾಮ ವಿದ್ಯಾಕೇಂದ್ರ, ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ವತಿಯಿಂದ ಶ್ರೀರಾಮ ಪದವಿ ಕಾಲೇಜಿನ ಆಜಾದ್ ಭವನದಲ್ಲಿ ಮಂಗಳವಾರ ನಡೆದ ‘ಪ್ರಚಲಿತ ಭಾರತ: ಸತ್ಯ-ಮಿಥ್ಯೆ’ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಗವದ್ಗೀತೆ, ಪುರಾಣ ಗ್ರಂಥಗಳಿಗೆ ಆರತಿ ಎತ್ತಿ ಅರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು ‘ನನ್ನ ದೇಶ- ನನ್ನ ಹೊಣೆ’ ಕುರಿತು ಮಾತನಾಡಿದರು.

ಪ್ರಯಾಗ್ ರಾಜ್‌ನಲ್ಲಿ 45 ದಿನಗಳ ಕಾಲ ನಡೆಯುತ್ತಿರುವ ಕುಂಭವೇಳ ವಿಶ್ವದ ಅತ್ಯಂತ ದೊಡ್ಡ ಮತ್ತು ಯಶಸ್ವಿ ಕಾರ್ಯಕ್ರಮವಾಗಿದೆಯಲ್ಲದೆ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಾಗಿದೆ. ಇಂತಹ ಪುಣ್ಯದ ಕಾರ್ಯಕ್ರಮದ ಬಗ್ಗೆ ರಾಜಕೀಯ ಕಾರಣಕ್ಕಾಗಿ ಕೆಲವರು ಮಾಡಲಾಗುವ ಆರೋಪಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಹಾಗೂ ಕೆಲವೊಂದು ಪ್ರಚಲಿತ ಮಾಧ್ಯಮಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮರೆಮಾಚುವ ಕೆಲಸಗಳು ಆಗಿವೆ ಎಂದು ಖೇದ ವ್ಯಕ್ತಪಡಿಸಿದರು.

ವಿದ್ಯಾಕೇಂದ್ರದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿದ್ದರು.

ಸಮಾರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ‘ಇಸ್ರೇಲ್ ನಾವರಿಯದ ಸತ್ಯಗಳು’ ಕುರಿತು ವಿಷಯ ಮಂಡಿಸಿದರು.

ಶಿಶುಮಂದಿರಕ್ಕೆ ಭೇಟಿ:

ಇದಕ್ಕೂ ಮೊದಲು ಅಣ್ಣಾಮಲೈ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ.ವಿಕ್ರಮ್ ಸಂಪತ್, ಕ್ಷಮಾ ನರಗುಂದ, ಶ್ರೀಕಾಂತ್ ಶೆಟ್ಟಿ ಮತ್ತಿತರರು ಶಿಶುಮಂದಿರ, ಪ್ರಾಥಮಿಕ ಶಾಲಾ ತರಗತಿಗಳಿಗೆ ಭೇಟಿ ನೀಡಿದರು.

ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಧ್ಯಾಲಕ್ಮೀ ವಂದಿಸಿದರು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿಲಕ್ಷ್ಮಿ ವಂದಿಸಿದರು.

Share this article