ಮುಚ್ಚಿನಮನೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಶಿವನ ಆಲಯ । ಕಾರ್ಜುವಳ್ಳಿ ಹಿರೇಮಠದ ಸ್ವಾಮಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಬರುವ ಮುಚ್ಚಿನಮನೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿವಲಿಂಗೇಶ್ವರಸ್ವಾಮಿ ದೇವಾಲಯ ಪ್ರವೇಶ ಹಾಗೂ ಶಿಲಾ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಅದ್ಧೂರಿಯಿಂದ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಅಲೂರು ತಾಲೂಕು ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿ, ‘ದೇಗುಲ ಸಂಸ್ಕೃತಿಯಿಂದ ಸಂಸ್ಕಾರವನ್ನು ಪಡೆಯುವ ನಿಟ್ಟಿನಲ್ಲಿ ಭಕ್ತರು ಪ್ರಯತ್ನ ಮಾಡಬೇಕಿದೆ. ಕಾರಣ ಇತ್ತೀಚಿನ ದಿನದಲ್ಲಿ ದೇಗುಲ ಕಟ್ಟಿಸಿ, ಉದ್ಘಾಟನೆ ನಡೆಸಿ ಕೈತೊಳೆದುಕೊಳ್ಳುವ ಜನರೇ ಹೆಚ್ಚು, ನೂತನ ದೇಗುಲ ಉದ್ಘಾಟನೆಯಾದ ಬಳಿಕ ಕನಿಷ್ಠ ನಿತ್ಯ ಪೂಜೆ, ಭಜನೆ ಹಾಗೂ ಪ್ರವಚನ ಏರ್ಪಡಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ನೀಡುವ ಕೆಲಸ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಭಾರತ ಗುರು ಸಂಸ್ಕೃತಿಯ ನಾಡು, ಈ ಕಾರಣದಿಂದಲೇ ಇಡೀ ವಿಶ್ವದಲ್ಲಿ ಭಾರತ ಗುರು ಸ್ಥಾನಕ್ಕೆ ಏರಿದೆ. ಇತ್ತೀಚಿನ ದಿನದಲ್ಲಿ ಪ್ರತಿ ಗ್ರಾಮ-ಗ್ರಾಮದಲ್ಲಿ ನೂತನ ದೇಗುಲಗಳು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ದೇವರ ದಯೆಯಿಂದ ಈ ಭಾರಿ ಕ್ಷೇತ್ರದಲ್ಲಿ ಉತ್ತಮ ಮಳೆ ಬರುತ್ತಿದೆ, ರೈತರ ಮೊಗದಲ್ಲಿ ಮಂದಹಾಸ ಮೂಡಲು ಅವರಿಗೆ ಮಳೆ, ಬೆಳೆ ಮತ್ತು ಉತ್ತಮ ಬೆಲೆ ಸಿಗಲಿ. ಮುಚ್ಚಿನಮನೆ ಗ್ರಾಮದಲ್ಲಿ ನಿರ್ಮಿಸಿದ ನೂತನ ದೇಗುಲದ ಉದ್ಘಾಟನೆ ಹರ್ಷದಾಯಕವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ. ಸಮಾಜದಲ್ಲಿ ಇಂದಿಗೂ ದೇವರನ್ನು ನಂಬುವ ಮತ್ತು ನಂಬಿಕೆ ಇಲ್ಲದ ಜನರು ಇದ್ದಾರೆ. ಆದರೆ ವಿಶ್ವದಲ್ಲಿ ಒಂದು ಆಗೋಚರ ಶಕ್ತಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆ ಬಲವಾಗಿದೆ. ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿನ ಶ್ರೀಗಳ ಮಾತುಗಳನ್ನು ತಾವು ಪಾಲಿಸಬೇಕಿದೆ. ಮಹಿಳೆಯರಿಗೆ ಗೌರವ ನೀಡಬೇಕು ಎಂದರು.ಅರಸೀಕೆರೆ ತಾಲೂಕು ಕೋಡಿಮಠ ಮಹಾಸಂಸ್ಥಾನ ಹಾರನಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಸಖರಾಯಪಟ್ಟಣದ ಹೋಬಳಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಪ್ರದೀಪ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್, ಶಿವಕುಮಾರ್, ನಿರಂಜನ್, ಯಶವಂತ್, ತೇಜುಕುಮಾರ್, ಶಂಕರ್, ಪ್ರವೀಣ್, ಮುಚ್ಚಿನಮನೆ ಗ್ರಾಮಸ್ಥರು ಹಾಜರಿದ್ದರು.