ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರ ದೂರು
ಬಸ್ಸುಗಳ ಸಮಸ್ಯೆ ಬಗ್ಗೆ ಎಷ್ಟು ಬಾರಿ ಕರೆ ಮಾಡಿದರೂ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಡಿಪೋದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ದೂರಿದರು.
ಮಂಗಳವಾರ ತಾಪಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಇಂದಿರಾನಗರ ರಘು, ಬೇಸಿಲ್, ಇಸ್ಮಾಯಿಲ್ ಸೇರಿದಂತೆ ಎಲ್ಲಾ ಸದಸ್ಯರು ಕೆಎಸ್ಆರ್.ಟಿಸಿ ಬಸ್ಸುಗಳು ಸರಿಯಾಗಿ ನಿಲುಗಡೆ ಮಾಡುತ್ತಿಲ್ಲ. ಮಹಿಳಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸದೆ ಉದ್ದಟತನ ತೋರಿಸುತ್ತಿದ್ದಾರೆ. ಇಂತಹ ಅಧಿಕಾರಿ ಗಳಿಂದಲೇ ಶಕ್ತಿ ಯೋಜನೆ ಸದ್ಬಳಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ ಬೇಸಿಲ್ ಮಾತನಾಡಿ, ಶಿವಮೊಗ್ಗದಿಂದ ಸೌತಿಕೆರೆಗೆ ಹಣ ಕೊಟ್ಟು ಟಿಕೇಟ್ ಪಡೆದ ಪುರುಷರಿಗೆ ಮಾತ್ರ ಸೌತಿಕೆರೆ ಯಲ್ಲಿ ಸ್ಟಾಪ್ ಕೊಡುತ್ತಾರೆ. ಆದರೆ, ಶಕ್ತಿ ಯೋಜನೆಯಡಿ ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೇಟ್ ಪಡೆದ ಮಹಿಳಾ ಪ್ರಯಾಣಿಕರಿಗೆ ಸೌತಿಕೆರೆಯಲ್ಲಿ ಸ್ಟಾಪ್ ಇಲ್ಲವೆಂದು ಮುಂದಿನ ಸ್ಟಾಪ್‌ನಲ್ಲಿ ಇಳಿಸುತ್ತಿದ್ದಾರೆ. ಹಣ ನೀಡಿದರೆ ಸೌತಿಕೆರೆಗೆ ಟಿಕೇಟ್ ನೀಟುತ್ತೇವೆ ಎನ್ನುತ್ತಾರೆ. ಹಾಗಾದರೆ ದುಡ್ಡು ಕೊಟ್ಟು ಟಿಕೇಟ್ ಪಡೆದ ಪ್ರಯಾಣಿಕರಿಗೆ ಮಾತ್ರವೇ ನಿಲುಗಡೆಯೇ ? ಶಕ್ತಿ ಯೋಜನೆ ಫಲಾನುಭವಿಗಳಿಗೆ ಏಕೆ ಸ್ಟಾಪ್ ನೀಡುವುದಿಲ್ಲ? ಎಂದು ಪ್ರಶ್ನಿಸಿದರು.
ಆರೋಗ್ಯ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, 2,146 ಅಂತ್ಯೋದಯ ಹಾಗೂ 12,414 ಕಾರ್ಡುಗಳು ಅನ್ನ ಭಾಗ್ಯ ಯೋಜನೆಯಲ್ಲಿವೆ. ಈ ಮಾಹೆಗೆ ಪಡಿತರ ವಿತರಿಸಲು ರಾಜ್ಯ ಸರ್ಕಾರದಿಂದ 2,152.45 ಕ್ವಿಂಟಾಲ್, ಎನ್.ಎಫ್.ಎಫ್.ಎ ನಿಂದ 2,701.30 ಕ್ವಿಂಟಾಲ್ ಒಟ್ಟು 4853.75 ಕ್ವಿಂಟಾಲ್ ಪ್ರಮಾಣದ ಅಕ್ಕಿ ಬಿಡುಗಡೆಯಾಗಿದೆ ಎಂದು ಗಣಪತಿ ತಿಳಿಸಿದರು.
ಸಭೆ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷೆ ಚಂದ್ರಮ್ಮ ವಹಿಸಿದ್ದರು. ಸಭೆಯಲ್ಲಿ ಸದಸ್ಯರಾದ ನಿತ್ಯಾನಂದ, ಕ್ಷೇತ್ರ ಕುಮಾರ್, ಸಂದೀಪ್,ಇಂದಿರಾ ನಗರ ರಘು,ಅಪೂರ್ವ,ಹೂವಮ್ಮ, ಜಿ.ನಾಗರಾಜ್, ಇಸ್ಮಾಯಿಲ್, ಬೇಸಿಲ್, ದೇವರಾಜ್, ಜಯರಾಂ, ಸೈಯದ್‌ಶಫೀರ್ ಅಹಮ್ಮದ್, ಅರುಣಪೂಜಾರಿ, ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಇದ್ದರು.